ಸುರತ್ಕಲ್: ಎಂಆರ್‌ಪಿಎಲ್‌ನ ಡೀಸೆಲ್ ಉತ್ಪನ್ನಗಳನ್ನು ಬೇರೆ ದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಲೇಷ್ಯಾ ಫ್ಲಾೃಗ್ ಹೊಂದಿರುವ ಚೀನಾದ ಟ್ಯಾಂಕರ್ ಹಡಗೊಂದು ಬುಧವಾರ ರಾತ್ರಿ ಎನ್‌ಎಂಪಿಟಿಗೆ ಬಂದಿದೆ. ಸಂಭಾವ್ಯ ಕರೊನಾ ತಡೆಗೆ, ಹಡಗಿನ ಶುಚಿತ್ವ, ನಾವಿಕ, ಸಿಬಂದಿ ಮೇಲೆ ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ನವಮಂಗಳೂರು ಬಂದರು ಮಂಡಳಿ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಶಿಪ್ಪಿಂಗ್ ನಿಯಮಾವಳಿ ಪ್ರಕಾರ ಇದು ನಿಯಮ ಪ್ರಕಾರ ಮಲೇಷ್ಯಾದ ಹಡಗಾಗುತ್ತದೆಯೇ ವಿನಾ ಚೀನಾದ ಹಡಗಲ್ಲ. ದೇಶದ ಯಾವುದೇ ಬಂದರಿಗೂ ಚೀನಾದ ಹಡಗುಗಳಿಗೆ ಸದ್ಯಕ್ಕೆ ಪ್ರವೇಶವಿಲ್ಲ. ಇಂತಹ ಸಂದರ್ಭ ಹಡಗಿನಲ್ಲಿ ಭಾರತದ ನಾವಿಕ, ಸಿಬ್ಬಂದಿಯಿದ್ದರೂ ಅವರಿಗೆ ಹಡಗಿನಿಂದ ಇಳಿಯಲು ಅನುಮತಿ ನಿರಾಕರಿಸಲಾಗುತ್ತಿದೆ. ಲೋಡಿಂಗ್ ಕಾರ್ಯ ಪೂರ್ಣ ಯಾಂತ್ರೀಕೃತವಾಗಿದ್ದು, ಮಾನವ ಶಕ್ತಿ ಬಳಕೆ ಕನಿಷ್ಠವಾಗಿರುತ್ತದೆ. ಸದ್ಯ ಈ ಹಡಗು ಬಂದರಿನ 11ನೇ ಬರ್ತ್‌ನಲ್ಲಿ ತಂಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಚೀನಾ ನಾವಿಕರು ಇರುವ ನೌಕೆ ಬಂದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿರುವುದು ಸತ್ಯಕ್ಕೆ ದೂರವಾದ ವಿಚಾರ. ಯಾವುದೇ ಕಾರಣಕ್ಕೂ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿಲ್ಲ ಎಂದು ಎಂಆರ್‌ಪಿಎಲ್ ಸ್ಪಷ್ಟನೆ ನೀಡಿದೆ. ಹಡಗಿನ ಆಯ್ಕೆ, ನಿಲುಗಡೆ ಹಾಗೂ ಲೋಡಿಂಗ್ ವಿಷಯದಲ್ಲಿ ಸರ್ಕಾರ ನಿರ್ದೇಶನ ಪ್ರಕಾರ ಕಾರ್ಯನಿರ್ವಹಿಸುತ್ತೇವೆ. ನಿಯಮ ಉಲ್ಲಂಘನೆ ಮಾಡುವ ಪ್ರಶ್ನೆಯೇ ಇಲ್ಲ. ಕರೊನಾದಂತಹ ಸಾಂಕ್ರಾಮಿಕ ರೋಗದ ಬಗ್ಗೆ ಅಸಡ್ಡೆ ಮಾಡುತ್ತಿಲ್ಲ ಎಂದು ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ (ಕಾರ್ಪೋರೇಟ್ ಕಮ್ಯುನಿಕೇಶನ್) ರುಡಾಲ್ಫ್ ವಿ.ಜೆ.ನೊರೊನ್ಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.