ಜಿಲ್ಲೆ

ಬಿಂಬ-ಬಿಂಬನಗಳಿಂದ ಸಿನಿಮಾ ಹುಟ್ಟು ‘ಸಿನಿಮಾ ತತ್ವ ಮೀಮಾಂಸೆ’ ವಿಚಾರಗೋಷ್ಠಿಯಲ್ಲಿ ಗಿರೀಶ್ ಕಾಸರವಳ್ಳಿ ಹೇಳಿಕೆ

ಮಂಗಳೂರು: ಸಿನಿಮಾದ ಸೌಂದರ್ಯ ಮೀಮಾಂಸೆ ಇತರ ಕಲೆಗಳಿಗಿಂತ ವಿಸ್ತಾರವಾದುದು. ಸಿನಿಮಾ ಕೇವಲ ಕಥೆ ಅಲ್ಲ. ಬಿಂಬ ಮತ್ತು ಬಿಂಬನಗಳ ಮೂಲಕ ಸಿನಿಮಾ ಹುಟ್ಟುತ್ತದೆ ಎಂದು ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ಭಾರತ್ ಫೌಂಡೇಶನ್ ನಗರದಲ್ಲಿ ಹಮ್ಮಿಕೊಂಡ ಲಿಟ್ ಫೆಸ್ಟ್ 7ನೇ ಆವೃತ್ತಿಯ ಎರಡದನೇ ದಿನ ಭಾನುವಾರ ‘ಸಿನಿಮಾ ತತ್ವ ಮೀಮಾಂಸೆ’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಂಬ ಮತ್ತು ಬಿಂಬನ ಅರ್ಥ ಮಾಡಿಕೊಂಡರೆ ಸಿನಿಮಾ ಸಮಗ್ರವಾಗಿ ಅರ್ಥವಾಗುತ್ತದೆ. ಸಿನಿಮಾವನ್ನು ಆಮೂಲಾಗ್ರವಾಗಿ, ಪರಿಪೂರ್ಣ ಕಲೆಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದು ಸೃಷ್ಟಿ ಮಾಡುವ ಬಿಂಬಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಬಿಂಬ ಎಂದರೆ ತೆರೆಯ ಮೇಲೆ ಕಾಣುವ ಬಿಂಬ ಅಲ್ಲ. ಅದು ಪ್ರೇಕ್ಷನ ಮನಸ್ಸಿನಲ್ಲಿ ಮೂಡುವುದು. ಆ ಬಿಂಬ ಮೂಡಬೇಕಾದರೆ ಯಾವ ರೀತಿಯಲ್ಲಿ ದೃಶ್ಯ ಕಟ್ಟಬೇಕೆಂಬುದನ್ನು ನಿರ್ದೇಶಕ ಯೋಚನೆ ಮಾಡಬೇಕಾಗುತ್ತದೆ. ಅಲ್ಲಿ ಅವನ ಕಲೆಗಾರಿಕೆ ಮತ್ತು ಹಿರಿಮೆ, ಗರಿಮೆ ಅರ್ಥವಾಗುತ್ತದೆ. ಅದಕ್ಕಾಗಿ ’ಬಿಂಬ ಬಿಂಬನ’ ಪುಸ್ತಕ ಬರೆಯಲಾಗಿದೆ ಎಂದರು.

ಸಿನಿಮಾದಲ್ಲಿ ಸಮಯ ಬಹು ಮುಖ್ಯ. ದೃಶ್ಯಗಳು ಪ್ರೇಕ್ಷನಿಗೆ ಚಿಂತನೆಗೆ ಅವಕಾಶ ಕಲ್ಪಿಸಬೇಕು. ಕಥೆ ಅನಾವರಣ ಮಾಡುವ ಶಕ್ತಿ ಇರಬೇಕು. ಸಿನಿಮಾ ಎಲ್ಲಾ ಕಲೆಗಳನ್ನು ಒಳಗೊಂಡಿದೆ. ಸಾಹಿತ್ಯ, ಸಂಗೀತ, ವಿನ್ಯಾಸ ಎಲ್ಲವೂ ಸೇರಿಕೊಂಡಿದೆ. ಸಿನಿಮಾದ ವಿಶುವಲ್, ಪಾಲಿಟಿಕ್ಸ್ ಲಯಗಳ ಬಗ್ಗೆಯೂ ಚರ್ಚೆ ಆಗಬೇಕು ಎಂದು ಕಾಸರವಳ್ಳಿ ಹೇಳಿದರು.

120 ವರ್ಷಗಳ ಇತಿಹಾಸವಿರುವ ಸಿನಿಮಾ ಕ್ಷೇತ್ರ ಪ್ರತಿ 20 ವರ್ಷಗಳಿಗೊಮ್ಮೆ ವ್ಯಾಖ್ಯೆ ಬದಲಾಗುತ್ತದೆ. ನಿರ್ದೇಶಕನ ಆಲೋಚನೆ ಪ್ರೇಕ್ಷನ ಮೇಲೆ ಅನಾವರಣವಾಗುತ್ತದೆ. ಆರಂಭದಲ್ಲಿ ಸಿನಿಮಾದಲ್ಲಿ ಧ್ವನಿ ಇರಲಿಲ್ಲ. ಬಳಿಕ ಧ್ವನಿ, ಬಣ್ಣ ಸೇರಿದಂತೆ ಅಪಾರ ಬದಲಾವಣೆಯಾಗಿರುವುದನ್ನು ಗಮನಿಸಬಹುದು ಎಂದವರು ಹೇಳಿದರು.

ಗೋಪಾಲಕೃಷ್ಣ ಪೈ ‘ಬಿಂಬ ಬಿಂಬನ’ ಕೃತಿ ರಚನೆಯ ಅನುಭವ ಹಂಚಿಕೊಂಡರು. ಚಿತ್ರ ವಿಮರ್ಶೆಯಲ್ಲಿ ಬದಲಾವಣೆಯ ಅಗತ್ಯವಿದೆ. ಕೇವಲ ಚಿತ್ರದ ಕಥೆ, ಸಂಗೀತ, ಕ್ಯಾಮರಾ ಇತ್ಯಾದಿ ವಿಚಾರಗಳನ್ನು ಬಿಟ್ಟು ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದರು.

ಈ ಸಂದರ್ಭ ಮಾಣಿಕ್ ಪ್ರೇಮ್‌ಚಂದ್ ಅವರು ಹಿಂದಿ ಹಾಗೂ ಭಾರತೀಯ ಸಿನಿಮಾಗಳ ಬಗ್ಗೆ ಬರೆದ ‘ಆ್ಯನ್ ದಿ ಮ್ಯೂಸಿಕ್ ಲಿವ್ಸ್ ಆನ್’ ಪುಸ್ತಕವನ್ನು ಗಿರೀಶ್ ಕಾಸರವಳ್ಳಿ ಬಿಡುಗಡೆಗೊಳಿಸಿದರು. ಅರುಣ್ ಭಾರಧ್ವಾಜ್ ಸಂವಾದ ನಡೆಸಿಕೊಟ್ಟರು.