ಮಂಗಳೂರು ಕೆವಿಕೆ ಆವರಣದಲ್ಲಿ ಆಯೋಜಿಸಿದ ಸಾಂಪ್ರದಾಯಿಕ ಭತ್ತದ ತಳಿಗಳ ಅಧ್ಯಯನದ ಕ್ಷೇತ್ರೋತ್ಸವದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೈತ ಸತ್ಯನಾರಾಯಣ ಬೆಳೇರಿ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ.ಜೆ. ರಮೇಶ, ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್., ಡಾ.ಹರೀಶ್ ಶೆಣೈ, ಡಾ.ಕೇದಾರನಾಥ, ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಪ್ರಗತಿಪರ ಕೃಷಿಕರಾದ ಕೆನ್ಯೂಟ್ ಅರೆನ್ಹಾ, ಕೇಶವ ಶೆಟ್ಟಿ, ಜಯಶೀಲ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಮೋಹನ್ ಕುಮಾರ, ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ, ಭಾಗವಹಿಸಿದ್ದರು. 
ಜಿಲ್ಲೆ

10 ವಿಶಿಷ್ಟ ಸಾಂಪ್ರದಾಯಿಕ ಭತ್ತದ ತಳಿಗಳ ವೈಜ್ಞಾನಿಕ ಅಧ್ಯಯನ; ಮಂಗಳೂರು ಕೆವಿಕೆ ತಾಕುಗಳಲ್ಲಿ ಕ್ಷೇತ್ರೋತ್ಸವ

Mangaluru - Prakash MC Manjeshwar

ಮಂಗಳೂರು: ನಿರ್ದಿಷ್ಟ ಪ್ರದೇಶಕ್ಕೆ ಸೂಕ್ತವಾದ ತಳಿಗಳ ಆಯ್ಕೆ ಮಾಡಿ ಲಾಭದಾಯಕ ಬೆಳೆ ತೆಗೆಯಲು ವಿಜ್ಞಾನಿಗಳಿಗೆ ರೈತರ ಸಹಕಾರ ತುಂಬಾ ಮುಖ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೈತ ಸತ್ಯನಾರಾಯಣ ಬೆಳೇರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಆವರಣದಲ್ಲಿ ಆಯೋಜಿಸಿದ ಸಾಂಪ್ರದಾಯಿಕ ಭತ್ತದ ತಳಿಗಳ ಅಧ್ಯಯನದ ಕ್ಷೇತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೈಗೊಂಡ ಹತ್ತು ಸಾಂಪ್ರದಾಯಿಕ ಭತ್ತದ ತಳಿಗಳ ವಿಶೇಷ ಗುಣಗಳ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ.ಜೆ. ರಮೇಶ ಅವರು, ಅಪೌಷ್ಠಿಕತೆ ಹಾಗೂ ಆರೋಗ್ಯ ಸಮಸ್ಯೆ ನಿವಾರಣೆಗೆ ಔಷಧೀಯ ಗುಣಗಳನ್ನು ಹೊಂದಿರುವ ಸೂಕ್ತ ಭತ್ತದ ತಳಿಗಳನ್ನು ಹೆಚ್ಚಾಗಿ ಬಳಸುವಂತೆ ಸಲಹೆ ನೀಡಿದರು.

ಸತ್ಯನಾರಾಯಣ ಬೆಳೇರಿ ಅವರು ಕಾಸರಗೋಡಿನ ಭತ್ತ ಬೆಳೆಯುವ ರೈತ. ಇವರು 650ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ಬೆಳೆಗಳ ಕಾವಲುಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರಿಂದ 10 ಸಾಂಪ್ರದಾಯಿಕ ಔಷಧ ಹಾಗೂ ಸುಗಂಧಿತ ಗುಣಗಳುಳ್ಳ ಭತ್ತದ ತಳಿಗಳನ್ನು ಪಡೆದು ಕೃಷಿ ವಿಜ್ಞಾನ ಕೇಂದ್ರದ ಪ್ರಾಯೋಗಿಕ ತಾಕುಗಳಲ್ಲಿ ವೈಜ್ಞಾನಿಕವಾಗಿ ಪರೀಕ್ಷಿಸಲಾಗುತ್ತಿದೆ. ಇವುಗಳಲ್ಲಿ ಈ ಕರಾವಳಿ ಪ್ರದೇಶಕ್ಕೆ ಹೊಂದಿಕೊಳ್ಳುವ ಹಾಗೂ ರೈತರ ಬೇಡಿಕೆಗೆ ಸೂಕ್ತವಾಗುವ ತಳಿಗಳನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ರೈತರಿಗೆ ಪೂರೈಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆಯೋಜಕರಾದ ಡಾ. ಮಲ್ಲಿಕಾರ್ಜುನ ಎಲ್. (ಮಣ್ಣು ವಿಜ್ಞಾನಿ) ಪ್ರಸ್ತಾವನೆಗೈದರು. ಡಾ. ಹರೀಶ್ ಶೆಣೈ ಸ್ವಾಗತಿಸಿರು. ಡಾ. ಕೇದಾರನಾಥ ವಂದಿಸಿದರು. ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಪ್ರಗತಿಪರ ಕೃಷಿಕರಾದ ಕೆನ್ಯೂಟ್ ಅರೆನ್ಹಾ, ಕೇಶವ ಶೆಟ್ಟಿ, ಜಯಶೀಲ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಮೋಹನ್ ಕುಮಾರ, ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ, ಭಾಗವಹಿಸಿದ್ದರು.