ಜಿಲ್ಲೆ

ಕಂಫರ್ಟ್ ಜೋನ್‌ನಿಂದ ಹೊರಬಂದರೆ ಉನ್ನತ ಸಾಧನೆ ಕರಾವಳಿ ಕುರುಬರ ಸಂಘದ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ನಟೇಶ್ ಅಳ್ವ ಬಣ್ಣನೆ

ಮಂಗಳೂರು: ಒಬ್ಬ ಶ್ರಮಿಕನ ಮಗ, ಕೂಲಿ ಕಾರ್ಮಿಕನ ಮಗ ವೈದ್ಯರೋ, ಮುಖ್ಯಮಂತ್ರಿಯೋ ಆಗುವುದು ದೊಡ್ಡ ಸಾಧನೆ. ನಾವು ನಮ್ಮ ಕಂಫರ್ಟ್ ಜೋನ್‌ನಿಂದ ಹೊರಬಂದರೆ ಉನ್ನತ ಸಾಧನೆ ಮಾಡಬಹುದು ಎಂದು ಕನ್ನಡ ಪ್ರಾಧ್ಯಾಪಕ ನಟೇಶ್ ಆಳ್ವ ಹೇಳಿದರು.


ಕರಾವಳಿ ಕುರುಬರ ಸಂಘದ ವತಿಯಿಂದ ಗುರುವಾರ ಮಣ್ಣಗುಡ್ಡ ರೋಟರಿ ಬಾಲಭನವದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಬ್ರಿಟಿಷರು ಭಾರತಕ್ಕೆ ಬಂದಾಗ, ಭಾರತ ಒಂದೇ ಛತ್ರದಡಿಯಲ್ಲಿರಲಿಲ್ಲ. ಬೇರೆ ಬೇರೆ ಅರಸರು ಆಳುತ್ತಿದ್ದರು. ಆದ್ದರಿಂದ ಹೊರಗಿನ ಶತ್ರುಗಳು ಒಳಬಂದರು. ನಮ್ಮ ದೇಶದ ಯಾವುದೇ ಹೋರಾಟಗಾರ, ಕ್ರಾಂತಿಕಾರಿಗಳು ಸೋತದ್ದು ನಮ್ಮ ಒಳಗಿನ ಶತ್ರುಗಳಿಂದಲೇ. ಹೊರಗಿನ ಶತ್ರುಗಳಿಂದ ಯಾವತ್ತೂ ನಮ್ಮವರು ಸೋತಿಲ್ಲ. ಸಂಗೊಳ್ಳಿ ರಾಯಣ್ಣ ಕೂಡ ಇದರ ಬಲಿಪಶು ಎಂದು ಸ್ಮರಿಸಿದರು. ಸ್ವಾತಂತ್ರ್ಯ ದಿನಾಚರಣೆಯಂಥ ಆಚರಣೆಗಳನ್ನು ಮನಃಪೂರ್ವಕವಾಗಿ, ಭಕ್ತಿಪೂರ್ವಕವಾಗಿ ಆಚರಿಸಿದಾಗ ಹಬ್ಬಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಕ್ಯಾನ್ಸರ್ ತಜ್ಞ ಡಾ.ಲೇಪಾಕ್ಷಿ ಮಾತನಾಡಿ, ಕಿತ್ತೂರು ಚೆನ್ನಮ್ಮನ ಸೇನೆಯಲ್ಲಿ ದಂಡನಾಯಕರಾಗಿದ್ದ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶಪ್ರೇಮಿ. 20ನೇ ವಯಸ್ಸಿನಲ್ಲಿ ಸೇನಾ ದಂಡನಾಯಕನಾಗಿ ಕಿತ್ತೂರಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ 1821ರಲ್ಲಿ ಅವರ ಸೈನ್ಯವನ್ನೇ ಹಿಮ್ಮೆಟ್ಟಿಸಿದ್ದರು. ಬ್ರಿಟೀಷರಿಗೆ ಸಿಂಹಸ್ವಪ್ನರಾಗಿದ್ದರು ಎಂದು ನೆನಪಿಸಿಕೊಂಡರು.


ಪತ್ರಕರ್ತ ಮೋಹನದಾಸ ಮರಕಡ ಅವರ ಎಜು ಕಾರುಣ್ಯ ಶೈಕ್ಷಣಿಕ ದತ್ತು ಯೋಜನೆಗೆ ದೇಣಿಗೆ ಹಸ್ತಾಂತರಿಸಲಾಯಿತು.
ಕರಾವಳಿ ಕುರುಬರ ಸಂಘದ ಅಧ್ಯಕ್ಷ ಕೆ.ಎನ್.ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಿವಾನಂದ ಯರಝೇರಿ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಡಾ.ಕೆ.ಇ.ಪ್ರಕಾಶ್ ಮುಖ್ಯ ಅತಿಥಿಗಳಾಗಿದ್ದರು. ಕೋಶಾಧಿಕಾರಿ ಮಲ್ಲಿಕಾರ್ಜುನ ಕಲ್ಲಹೊಲದ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಿರಂಜನ್ ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾರಾಯಣ ಪಾಟೀಲ್ ವಂದಿಸಿದರು.


ಸ್ವಾತಂತ್ರ್ಯ ದಿನಾಚರಣೆಯೆಂದರೆ ಹಬ್ಬದ ವಾತಾವರಣ ಮೂಡುತ್ತದೆ. ಅನೇಕ ಹಿರಿಯರ ತ್ಯಾಗ, ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ಬಂದಿದೆ. ಅದರ ಪ್ರತೀಕವಾಗಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ನಾವು ಪಡೆದ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬಳಸದೆ ದೇಶದ ಅಭಿವೃದ್ಧಿಯಲ್ಲಿ ನಾವು ಕೈಜೋಡಿಸಬೇಕು.
ಶಿವಾನಂದ ಯರಝೇರಿ
ನಿರ್ದೇಶಕರು, ಪ್ರದೇಶ ಕುರುಬರ ಸಂಘ ಬೆಂಗಳೂರು