ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.15ರಿಂದ 25ರ ತನಕ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವ ಆರಂಭಗೊಂಡಿದ್ದು, ಭಾನುವಾರ ಶಾರದೆ, ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಪಂಜ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು ದಸರಾ ಮೂಲಕ ವಿಶ್ವವ್ಯಾಪಿಯಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಜನರ ಸ್ಪಂದನೆಯೂ ಅಧ್ಬುತವಾಗಿದೆ. ಕರ್ಣಾಟಕ ಬ್ಯಾಂಕ್‌ನಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಬೆಳಗ್ಗೆ ಗುರು ಪ್ರಾರ್ಥನೆ, ನವಕಲಶಾಭಿಷೇಕ, ಕಲಶ ಸ್ಥಾಪನೆ, ನವದುರ್ಗೆ ಮತ್ತು ಶಾರದಾ ಪ್ರತಿಷ್ಠಾಪನೆ, ಪುಷ್ಪಾಲಂಕಾರ ಮಹಾಪೂಜೆ, ಭಜನಾ ಕಾರ್ಯಕ್ರಮ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನಡೆಯಿತು. ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಆದಿಶಕ್ತಿ, ಶೈಲಪುತ್ರಿ, ಗಣೇಶ, ಶಾರದಾ ಮಾತೆ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ದೇವಸ್ಥಾನದ ನವೀಕರಣದ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಲತಿ ಜೆ.ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಶೆಟ್ಟಿ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಜಯಾನಂದ ಅಂಚನ್, ನವೀನ್ ಡಿಸೋಜ, ಅನಿಲ್ ಕುಮಾರ್, ಕಿರಣ್ ಕುಮಾರ್, ಬಿಜೆಪಿ ಮುಖಂಡ ಕ್ಯಾ.ಬ್ರಿಜೇಶ್ ಚೌಟ, ಜಿ.ಪಂ. ಮಾಜಿ ಸದಸ್ಯೆ ಮಮತಾ ಗಟ್ಟಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಸಮಿತಿ ಸದಸ್ಯರಾದ ರವಿಶಂಕರ್ ಮಿಜಾರ್, ಮಹೇಶ್ಚಂದ್ರ, ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ.ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ.ಅನಸೂಯಾ ಬಿ.ಟಿ.ಸಾಲಿಯಾನ್, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.