Gavel on desk. Isolated with good copy space. Dramatic lighting. 
ಜಿಲ್ಲೆ

ಅಕ್ರಮ ಆಸ್ತಿ ಹೊಂದಿದ್ದ ಆರೋಪ ಕೆ.ಎಸ್.ಆರ್.ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕೃಷ್ಣಪ್ಪ ದೋಷಮುಕ್ತ

ಮಂಗಳೂರು: ಮಂಗಳೂರಿನ ಏಳನೇ ಕೆ.ಎಸ್.ಆರ್.ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕೃಷ್ಣಪ್ಪರನ್ನು ಅಕ್ರಮ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ತೀರ್ಪು ನೀಡಿದ್ದಾರೆ.


1991 ಬ್ಯಾಚ್ ನ ಅಧಿಕಾರಿಯಾಗಿದ್ದ ಕೃಷ್ಣಪ್ಪನವರ ಮನೆ ಮತ್ತು ಕಚೇರಿಗೆ 2006ನೇ ಇಸವಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ನಂತರ ಬ್ಯಾಂಕ್ ಲಾಕರ್ ಗಳನ್ನು ಪರಿಶೀಲಿಸಿದಾಗ ಸುಮಾರು 87 ಲಕ್ಷ ರೂಪಾಯಿಗಿಂತಲೂ ಅಧಿಕವಾದ ಆಸ್ತಿ ಪಾಸ್ತಿ ಹೊಂದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಸನ್ನ ವಿ.ರಾಜ್ ರವರು ತನಿಖೆ ನಡೆಸಿ ಡಾ.ಪ್ರಭುದೇವ ಮಾನೆ ಯವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಕೃಷ್ಣಪ್ಪರವರು ಮೂಲತಃ ಹಾವೇರಿ ಜಿಲ್ಲೆಯ ಖಂಡೇರಾಯನ ಹಳ್ಳಿಯವರಾಗಿದ್ದು, ಖಂಡೇರಾಯನ ಹಳ್ಳಿ ಮತ್ತು ದಾವಣಗೆರೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದು ಮತ್ತು ಕೆ.ಎಸ್.ಆರ್.ಪಿ ಅಧಿಕಾರಿಯಾಗುವ ಪೂರ್ವದಲ್ಲಿ ಕೇಂದ್ರ ಸರ್ಕಾರದ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕೃಷ್ಣಪ್ಪರ ಪತ್ನಿಗೆ ಮದುವೆ ಸಂದರ್ಭದಲ್ಲಿ ತವರು ಮನೆಯವರು ಚಿನ್ನ, ಬೆಳ್ಳಿ ಅಲ್ಲದೆ ಸ್ಥಿರಾಸ್ಥಿಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು.

ಈ ಎಲ್ಲ ವಿಚಾರಗಳನ್ನು ಕೃಷಪ್ಪನವರು ಪ್ರತಿವರ್ಷ ಸರ್ಕಾರಕ್ಕೆ ಸಲ್ಲಿಸುವ ಆಸ್ತಿ ಮತ್ತು ದಾಯತ್ವ ಪಟ್ಟಿಯಲ್ಲಿ ತಿಳಿಸಿದ್ದರೂ ಕೂಡ ಈ ಆದಾಯಗಳನ್ನು ಪರಿಶೀಲಿಸದೆ ಲೋಕಾಯುಕ್ತ ಅಧಿಕಾರಿಗಳು ದೋಷರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಕೆ.ಪಿ.ಎಸ್ ಅಧಿಕಾರಿಯಾಗಿದ್ದ ಕೃಷ್ಣಪ್ಪ ಅವರು ಐ.ಪಿ.ಎಸ್ ಅಧಿಕಾರಿಯಾಗಿ ಪದೋನ್ನತಿ ಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವಕೀಲ ಪಿ.ಪಿ ಹೆಗ್ಡೆ ಅಸೋಸಿಯೇಟ್ಸ್ ನ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು.