ಜಿಲ್ಲೆ

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಬಂಧಿತ ಇಬ್ಬರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ

ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳನ್ನು ಮಂಗಳೂರು ನ್ಯಾಯಾಲಯಕ್ಕೆ ಗುರುವಾರ ಪೊಲೀಸರು ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಫೆ.3ರ ತನಕ ಪೊಲೀಸ್ ಕಸ್ಟಡಿಗೆ ನೀಡಿದೆ.

ಬ್ಯಾಂಕ್ ದರೋಡೆ ಪ್ರಕರಣದ ಕಿಂಗ್ ಪಿನ್ ಮುರುಗನ್ ಡಿ. ದೇವರ್ ಹಾಗೂ ಸಹಚರ ಜೋಶುವಾ ರಾಜೇಂದ್ರನ್ ಇವರನ್ನು ತಮಿಳುನಾಡಿನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದರು. ಅಲ್ಲಿನ ಕೋರ್ಟ್‌ಗೆ ಹಾಜರುಪಡಿಸಿ ಬಾಡಿ ವಾರಂಟ್ ಪಡೆದು ಬುಧವಾರ ತಡ ರಾತ್ರಿ ಮಂಗಳೂರಿಗೆ ಕರೆತಂದಿದ್ದರು. ಈಗ ಪ್ರಕರಣದ ತನಿಖಾಧಿಕಾರಿ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಮಂಗಳೂರಿನ 7ನೇ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿ, 15 ದಿನಗಳ ಪೊಲೀಸ್ ಕಸ್ಟಡಿ ಕೋರಿತ್ತು. ನ್ಯಾಯಾಲಯ ಫೆ.3ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ತನಿಖಾ ತಂಡ ಕೋಟೆಕಾರು ಬ್ಯಾಂಕ್ ಹಾಗೂ ಸ್ಥಳೀಯವಾಗಿ ಸ್ಥಳ ಮಹಜರು ನಡೆಸಿ ತನಿಖೆ ನಡೆಸಲಿದ್ದಾರೆ. ಮೂರು ದಿನಗಳ ಹಿಂದೆ ಇದೇ ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿ ಕಣ್ಣನ್ ಮಣಿಯನ್ನು ಸ್ಥಳ ಮಹಜರು ನಡೆಸುವ ವೇಳೆ ಪರಾರಿಗೆ ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ಹಾಕಿದ್ದರು. ಕಣ್ಣನ್ ಈಗ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಗಳನ್ನು ಕರೆ ತರುತ್ತಿದ್ದ ವೇಳೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಕರೆ ತರಲಾಯಿತು. ಪೊಲೀಸರು ಬೆಳಗ್ಗೆ 11 ಗಂಟೆ ವೇಳೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆ ತಂದಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಹಿಂತಿರುಗಿ ಕರೆದೊಯ್ದರು.

ಉಳಿದ ಆರೋಪಿಗಳ ಪತ್ತೆಗೆ ಹುಡುಕಾಟ: ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದಂತೆ ಏಳೆಂಟು ಆರೋಪಿಗಳು ಬಂಧನವಾಗಬೇಕಿದೆ. ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ಎರಡು ಪೊಲೀಸ್ ತಂಡ ಬೀಡು ಬಿಟ್ಟಿದೆ. ಆರೋಪಿಗಳ ಮನೆ ಹಾಗೂ ಅವರ ಸಂಪರ್ಕದಲ್ಲಿರುವವರ ಮೇಲೆ ನಿಗಾ ಇಟ್ಟಿದ್ದಾರೆ. ತಂಡದಲ್ಲಿ ಕನ್ನಡ ಮಾತನಾಡುತ್ತಿದ್ದ ಸ್ಥಳೀಯ ವ್ಯಕ್ತಿಗಳು ಯಾರೆಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ತನಿಖೆ ಸವಾಲು: ದರೋಡೆ ಪ್ರಕರಣದಲ್ಲಿ ಬಂಧಿತ ಮೂವರು ಕೂಡಾ ನಟೋರಿಯಸ್ ಕ್ರಿಮಿನಲ್‌ಗಳಾಗಿದ್ದು, ಅವರನ್ನು ತನಿಖೆ ನಡೆಸುವುದೇ ಪೊಲೀಸರಿಗೆ ಸವಾಲಾಗಿದೆ. ಪೊಲೀಸ್ ವ್ಯವಸ್ಥೆ ಹಾಗೂ ತನಿಖೆಯ ಬಗ್ಗೆ ಎಲ್ಲ ಮಾಹಿತಿಯೂ ಇವರಿಗಿದ್ದು, ಇದರಿಂದ ತನಿಖೆಯ ಹಾದಿ ತಪ್ಪಿಸಲು ಏನೇನೋ ಹೇಳಿಕೆ ನೀಡಿ ಅಧಿಕಾರಿಗಳನ್ನೇ ದಾರಿ ತಪ್ಪಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಚಿನ್ನಾಭರಣ ವಶಕ್ಕೆ: ದರೋಡೆಗೈದ ಚಿನ್ನಾಭರಣವನ್ನು ಆರೋಪಿಗಳು ವಿವಿಧ ಕಡೆ ಅವಿತು ಇಟ್ಟಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಕೆಲವೊಂದು ವಿಚಾರವನ್ನು ಮುರುಗನ್ ಬಾಯಿಬಿಟ್ಟಿದ್ದು, ಈ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿರುವ ಮಂಗಳೂರು ಪೊಲೀಸರು ಅಲ್ಲಿನ ಪೊಲೀಸರ ಸಹಕಾರ ಪಡೆದು ದರೋಡೆಯಲ್ಲಿ ದೋಚಿದ್ದ ಬಹುತೇಕ ಚಿನ್ನಾಭರಣ, ನಗದನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.