ಜಿಲ್ಲೆ

ವಿಯೆಟ್ನಾಂ ಪ್ರಜೆಯ ಜೀವ ಉಳಿಸಿದ ಮಂಗಳೂರಿನ ಕೆಎಂಸಿ ಆಸ್ಪತ್ರೆ

ಮಂಗಳೂರು: ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ’ಯು ವಿಯೆಟ್ನಾಂ ಮೂಲದ ಬಾಣಸಿಗರೊಬ್ಬನಿಗೆ ಯಶಸ್ವಿಯಾಗಿ ಹೃದಯ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸಿದೆ.


19 ಸದಸ್ಯರನ್ನು ಒಳಗೊಂಡ ಹಡಗೊಂದರ ಸಿಬ್ಬಂದಿಯಾಗಿದ್ದ 39 ವರ್ಷದ ವಿಯಟ್ನಾಂ ಮೂಲದ ಬಾಣಸಿಗನಿಗೆ ಹಡಗು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ ಸ್ವಲ್ಪ ಸಮಯದಲ್ಲೇ ಹೃದಯಾಘಾತ ಸಂಭವಿಸಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಅವರನ್ನು ಮರುದಿನ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.


ರೋಗಿಯು ರಾತ್ರಿ ವೇಳೆ ಮತ್ತೆ ರಕ್ತದ ಹರಿವಿನ ಸಮಸ್ಯೆಗೆ(ಮರು-ಇನ್‌ಫ್ರಾಕ್ಷನ್) ತುತ್ತಾಗಿದ್ದರಿಂದ ಅವರಿಗೆ ತುರ್ತು ರಕ್ಷಣಾ ಆಂಜಿಯೋಪ್ಲಾಸ್ಟಿ ಮಾಡಬೇಕಾದ ಅಗತ್ಯ ಏರ್ಪಟ್ಟಿತು. ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಪದ್ಮನಾಭ ಕಾಮತ್ ನೇತೃತ್ವದ ವಿಶೇಷ ವೈದ್ಯಕೀಯ ತಂಡವು ಡಾ.ಐಶ್ವರ್ಯಾ ಮತ್ತು ಡಾ.ಲಾವಣ್ಯ ಸೇರಿದಂತೆ ನುರಿತ ಅರಿವಳಿಕೆ ತಂಡದೊಂದಿಗೆ ತುರ್ತು ಕಾರ್ಯವಿಧಾನವನ್ನು ಅತ್ಯಂತ ಪರಿಣಿತಿಯಿಂದ ನಿರ್ವಹಿಸಿತು.


ನಮ್ಮ ತಂಡದ ತ್ವರಿತ ಕ್ರಮ ಹಾಗೂ ‘ಕೆಎಂಸಿ’ ಆಸ್ಪತ್ರೆಯಲ್ಲಿರುವ ಸುಧಾರಿತ ಸೌಲಭ್ಯಗಳ ನೆರವಿನಿಂದ ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ನಡೆಸಲು ಸಾಧ್ಯವಾಯಿತು. ರೋಗಿಯು ಈಗ ಅಪಾಯದಿಂದ ಪಾರಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ. ಪದ್ಮನಾಭ ಕಾಮತ್ ತಿಳಿಸಿದರು. ಇಟಿಎ ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಪಾಲುದಾರ ಸಾಯಿ ಶರಣ್ ಕೊಟ್ಟಾರಿ, ನವಮಂಗಳೂರು ಬಂದರು, ವಲಸೆ, ಕಸ್ಟಮ್ಸ್ ಮತ್ತು ಆರೋಗ್ಯ ಅಧಿಕಾರಿಗಳಾದ ಡಾ. ಪುತ್ರನ್ ಮತ್ತು ಡಾ. ಆಶಿತ್ ಡಿ ಶೆಟ್ಟಿಯನ್ ಅವರ ಬೆಂಬಲ ನಿರ್ಣಾಯಕವಾಗಿತ್ತು ಎಂದವರು ತಿಳಿಸಿದ್ದಾರೆ.


ವಿದೇಶ ಪ್ರವಾಸದ ವೇಳೆ ಬೇರೆ ದೇಶದ ಪ್ರಜೆಯೊಬ್ಬರು ಹೃದಯಾಘಾತಕ್ಕೆ ಒಳಗಾದಾಗ, ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆ ಮತ್ತು ಸಮನ್ವಯವು ನಿರ್ಣಾಯಕವಾಗಿದೆ. ಭಾಷಾ ಅಡೆತಡೆಗಳನ್ನು ನಿಭಾಯಿಸುವುದು, ವಿಮಾ ಸೌಲಭ್ಯದ ಪರಿಶೀಲನೆ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ನಿಖರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವುದು ಮುಂತಾದವು ಸವಾಲಾಗಿದೆ. ಇವೆಲ್ಲವುಗಳನ್ನು ಆಸ್ಪತ್ರೆಯ ತಂಡ ನಿಭಾಯಿಸಿ ಯಶಸ್ಸು ಗಳಿಸಿದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಸಿಓಓ ಸಗೀರ್ ಸಿದ್ದಿಕಿ ತಿಳಿಸಿದ್ದಾರೆ.