ಜಿಲ್ಲೆ

ಶಿವನಗರ ಮೊಬೈಲ್ ಟವರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

ಹರೀಶ ಎಂ.


ಮಂಗಳೂರು: ಕಾವೂರು ಶಿವನಗರ 5ನೇ ರಸ್ತೆಯ ಸಮೀಪದಲ್ಲಿ ಬಡಾವಣೆಯ ನಡುವೆ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದೆ ಮೊಬೈಲ್ ಟವರ್ ನಿರ್ಮಾಣಕ್ಕೆ ಗ್ರಾಮಸ್ಥರು ಮಂಗಳವಾರ ವಿರೋಧ ವ್ಯಕ್ತಪಡಿಸಿದರು.


ರಸ್ತೆ ಅತಿಕ್ರಮಣವಾಗಿರುವ ಹಾಗೂ ಟವರ್ ವಿಕಿರಣದಿಂದ ಹಿರಿಯರಿಗೆ, ಮಕ್ಕಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಆದ್ದರಿಂದ ತತ್‌ಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.


ಈ ಭಾಗದಲ್ಲಿ ಮುಲ್ಲಕಾಡು ಪರಿಸರದ ನೆರೆನೀರು ಹರಿಯುವ ರಾಜಕಾಲುವೆಯ ಹಾದು ಹೋಗುತ್ತಿದ್ದು, ಸಮೀಪದಲ್ಲೇ ಪಾಲಿಕೆ ಸ್ವಾಧೀನ ಪಡಿಸಿಕೊಂಡ 5 ಮೀಟರ್ ಅಗಲದ ರಸ್ತೆಯೂ ಅತಿಕ್ರಮಣವಾಗಿದೆ. ಕೆಲವೆಡೆ 2 ಮೀಟರ್ ರಸ್ತೆಯೂ ಇಲ್ಲವಾಗಿದೆ. ಹತ್ತು ವರ್ಷದ ಹಿಂದೆ ಒಳ ಚರಂಡಿ ವ್ಯವಸ್ಥೆಗೆ ಸ್ವಾಧೀನವಾದ ರಸ್ತೆ ಕಿರಿದಾಗಿದೆ ಎಂದು ಹಿರಿಯರಾದ ಹಿರಿಯಣ್ಣ ಗೌಡ ಅಸಮಾಧಾನ ವ್ಯಕ್ತ ಪಡಿಸಿದರು.


ಪರಿಹಾರವಾಗಿ ಸರ್ಕಾರದಿಂದ ಪರಿಹಾರ ಪಡೆದರೂ ರಸ್ತೆ ಮೀಸಲಿರಿಸಿದ ಸ್ಥಳದಲ್ಲಿ ತಂತಿ ಬೇಲಿ ಹಾಕಲಾಗಿದೆ. ಇದೀಗ ಟವರ್ ಮಾಡುವ ಭರದಲ್ಲಿ ಕಲ್ಲು, ಮರಳು, ಜಲ್ಲಿ ಮತ್ತು ಕಾಮಗಾರಿಯ ಸಾಮಗ್ರಿಗಳನ್ನು ರಸ್ತೆಗೆ ಹಾಕಿ ರಸ್ತೆಯನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಮುಲ್ಲಕಾಡು, ಶಿವನಗರದಿಂದ ಹತ್ತಿರದ ಮಂಜಲಕಟ್ಟೆ, ಆಕಾಶಭವನ ಮತ್ತು ಪಂಜಿಮೊಗರಿಗೆ 5ಕಿ.ಲೋ ಮೀಟರ್ ಸುತ್ತುವರಿದು ಪ್ರಯಾಣ ಮಾಡಬೇಕಾಗುತ್ತದೆ ಎಂದು ದಾಮೋದರ್ ಹೇಳಿದರು.


ಜಗದೀಶ್ ಸುವರ್ಣ ಮಾತನಾಡಿ, ಈ ಮೊಬೈಲ್ ಟವರ್ ನಿಂದ ಹೊರಸೂಸುವ ಅತೀ ಸೂಕ್ಷ್ಮ ತರಂಗಾಂತರದಿಂದ ಪರಿಸರಕ್ಕೆ ಪ್ರಾಣಿ ಪಕ್ಷಿಗಳಿಗೆ ಮತ್ತು ಸೂಕ್ಷ್ಮ ಜೀವಿಗಳಿಗೆ ತೊಂದರೆಯಾಗಬಹುದು. ಅಲ್ಲದೇ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.


ಆನಂದ ಪುರುಷ, ಹರಿಣಾಕ್ಷಿ, ಶ್ವೇತ, ಲಕ್ಷ್ಮೆನಾರಾಯಣ ಶೆಟ್ಟಿ, ಅನಂತರಾಮ್, ನಾರಾಯಣ ಕೋಟ್ಯಾನ್, ಲಕ್ಷ್ಮಣ, ಗಿಲ್ಬರ್ಟ್, ಸಂದೀಪ್ ಕುಮಾರ್ ಹಾಗೂ ಸ್ಥಳೀಯ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ತತ್‌ಕ್ಷಣ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದೇನೆ. ಕಾಲುವೆ ತಡೆಗೋಡೆ ನಿರ್ಮಾಣ ಹಾಗೂ ಸಮೀಪದ ರಸ್ತೆ ಅತಿಕ್ರಮಣವಾಗಿದ್ದರೆ ಸರ್ವೆ ಮಾಡಿಸಿ,ತೆರವುಗೊಳಿಸಿ ಜನರ ಅನುಕೂಲಕ್ಕೆ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು.
ಗಾಯತ್ರಿ ಎ. ರಾವ್
ಮನಪಾ ಸದಸ್ಯೆ