ಮಂಗಳೂರು: ಮರಕಡ ಬಳಿಯ ಮಿಲ್ಲತ್ ನಗರದಲ್ಲಿ ಶುಕ್ರವಾರ ರಾತ್ರಿ ಮದ್ಯ ಸೇವನೆ ಮಾಡಿದ ಕೂಲಿ ಕಾರ್ಮಿಕನೋರ್ವ ಮಸೀದಿಗೆ ನುಗ್ಗಿ, ಅಲ್ಲಿದ್ದವರನ್ನು ಅವಾಚ್ಯವಾಗಿ ನಿಂದಿಸಿದ್ದು, ಕಾವೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಾಗಲಕೋಟ ಮೂಲದ ಕೂಲಿ ಕಾರ್ಮಿಕ ಹನುಮಂತ ಎಂದು ಪೊಲೀಸರು ಗುರುತಿಸಿದ್ದಾರೆ. ರಾತ್ರಿ 1 ಗಂಟೆ ವೇಳೆಗೆ ಮಸೀದಿಯ ಒಳಕ್ಕೆ ಬಂದಿದ್ದು ಮಾನಸಿಕ ಸ್ಥಿಮಿತ ಇಲ್ಲದಂತೆ ವರ್ತಿಸಿದ್ದಾನೆ. ಕುಡಿದ ಮತ್ತಿನಲ್ಲಿ ತೂರಾಡುತ್ತಾ ಏನೇನೋ ಅವಾಚ್ಯ ಶಬ್ದಗಳಿಂದ ಮಸೀದಿ ಸಿಬಂದಿಯನ್ನು ನಿಂದಿಸಿದ್ದಾನೆ. ಮಸೀದಿ ಸಿಬಂದಿ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಕಾವೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಕಾರ್ಮಿಕನನ್ನು ಎಳೆದೊಯ್ದಿದ್ದಾರೆ.
ವಿಚಾರಣೆ ನಡೆಸಿದಾಗ 20 ದಿನಗಳ ಹಿಂದೆ ಬಾಗಲಕೋಟೆಯಿಂದ ಮಂಗಳೂರಿಗೆ ಕೂಲಿ ಕೆಲಸಕ್ಕಾಗಿ ಬಂದಿದ್ದ. ಮದ್ಯ ಸೇವನೆ ಚಟ ಹೊಂದಿರುವ ಈತ ಈ ರೀತಿ ವರ್ತಿಸಿದ್ದಾನೆ. ಕಾವೂರು ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.