ಮಂಗಳೂರು: ಸುಯೆಜ್ ಮತ್ತು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಕಾಲೇಜು ಟ್ರಸ್ಟ್ ವತಿಯಿಂದ ವಿಶ್ವ ಜಲ ನಷ್ಟ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ ನೀರಿನ ಉಳಿತಾಯದ ಅರಿವು ಮೂಡಿಸುವ ದಿಸೆಯಲ್ಲಿ ಜಾಗೃತಿ ಕಾರ್ಯಕ್ರಮ ಇಂದು ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ನೀರಿನ ಅಕ್ರಮ ಸಂಪರ್ಕ ಮತ್ತು ನೀರಿನ ಸೋರಿಕೆಯನ್ನು ತಡೆಯಲು ಜಲಸಿರಿ ಯೋಜನೆ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.
ತುಂಬೆಯಿಂದ ನಗರಕ್ಕೆ ನಿತ್ಯ 160 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, 50ರಿಂದ 60 ಎಂಎಲ್‌ಡಿ ನೀರಿಗೆ ಮಾತ್ರ ಬಿಲ್ ಬರುತ್ತಿದ್ದು, ಉಳಿದದ್ದು ಅಕ್ರಮ ಸಂಪರ್ಕ ಮತ್ತು ಸೋರಿಕೆಯಿಂದ ನಷ್ಟವಾಗುತ್ತಿದೆ ಎಂದ ಅವರು, ನೀರು ಉಳಿಸಲು ನಡೆಸುವ ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದರು.
ಬ್ರಹ್ಮಶ್ರೀ ನಾರಾಯಣ ಗುರು ಕಾಲೇಜು ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಪಿ. ದಯಾಕರ ಅಧ್ಯಕ್ಷತೆ ವಹಿಸಿದ್ದರು.
ಕೆಯುಐಡಿಎಫ್‌ಸಿ ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಖಾದರ್, ಸುಯೆಜ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ರೇಷ್ಮಾ ಉಳ್ಳಾಲ್ ಮತ್ತು ನೆಟ್‌ವಕಿರ್ಂಗ್ ಮ್ಯಾನೇಜರ್ ಉದಯ ಪ್ರಭು ಜಲಸಿರಿ ಯೋಜನೆ ಹಾಗೂ ವಿಶ್ವ ಜಲ ನಷ್ಟ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು.
ಕೆಯುಐಡಿಎಫ್‌ಸಿ ಇಂಜಿನಿಯರ್ ಭಾಸ್ಕರ್, ಸೂಯೆಜ್ ಅಧಿಕಾರಿಗಳಾದ ಸನೂಪ್, ರಾಕೇಶ್ ಶೆಟ್ಟಿ, ರಿಚರ್ಡ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಚಿದಾನಂದ್, ಕಾಲೇಜು ಪ್ರಾಂಶುಪಾಲ ಉಮೇಶ್ ಎಂ.ಕರ್ಕೇರ ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ಎಚ್.ಎಸ್. ಕಾರ್ಯಕ್ರಮ ನಿರ್ವಹಿಸಿದರು.