ಮಂಗಳೂರು : ವೈದ್ಯರು ನಿರಂತರ ವೈದ್ಯಕೀಯ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿ, ನೂತನ ಆವಿಷ್ಕಾರಗಳಿಗೆ ಸ್ಪಂದಿಸಿ, ಉನ್ನತ ಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡಿ ರೋಗಿಗಳ ಬದುಕನ್ನು ಹಸನುಗೊಳಿಸುವ ಧ್ಯೇಯ-ಉದ್ದೇಶವನ್ನು ಅಳವಡಿಸಿ ಜನಮನ್ನಣೆ ಸಂಪಾದಿಸಬೇಕು ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸಲಹೆ ನೀಡಿದ್ದಾರೆ.
ಅವರು ಶಿಶು ಮತ್ತು ಮಕ್ಕಳ ವಿಭಾಗದ ಆಶ್ರಯದಲ್ಲಿ ತಮ್ಮ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜರಗಿದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ನವಜಾತ ಶಿಶು ಮತ್ತು ಮಕ್ಕಳ ಅಂತಃಸ್ರಾವದ ಬಗ್ಗೆ ರಾಜ್ಯ ಮಟ್ಟದ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ, ವೈದ್ಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೈದ್ಯರಿಗೆ ಸಮಾಜದಲ್ಲಿ ಶ್ರೇಷ್ಠ ಮಟ್ಟದ ಸ್ಥಾನವಿದೆ. ಅವರು ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಉನ್ನತ ಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡಿ ರೋಗಿಗಳ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸಬೇಕು ಮತ್ತು ತಮ್ಮ ಘನತೆ ಗೌರವಗಳನ್ನು ರಕ್ಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಖ್ಯಾತ ಶಿಶು ಮತ್ತು ಮಕ್ಕಳ ತಜ್ಞೆ ಡಾ. ಶೈಲಾ ಭಟ್ಟಾಚಾರ್ಯ ಮತ್ತು ಕಣಚೂರು ವೈದ್ಯಕೀಯ ಸಂಸ್ಥೆಯ ಡಾ. ಗುರುಪ್ರಸಾದ್ ಭಟ್‌ರವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ನೀಡಿದ ಅಮೂಲ್ಯ ಕೊಡುಗೆ, ಸಾಧನೆಯನ್ನು ಪರಿಗಣಿಸಿ, ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಶಹನವಾಜ್ ಮಾಣಿಪಾಡಿ ಮತ್ತು ಸಲಹೆಗಾರರಾದ ಡಾ. ಎಂ.ವಿ. ಪ್ರಭು ಶುಭ ಹಾರೈಸಿದರು.
ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡಾ.ಶಂಶಾದ್ ಎ. ಖಾನ್, ಡಾ. ನೂರುಲ್ಲಾ, ಸಂಘಟನಾ ಅಧ್ಯಕ್ಷ ಡಾ. ಓನಿಯಲ್ ಫರ್ನಾಂಡಿಸ್, ಕಾರ್ಯದರ್ಶಿ ಡಾ. ಶಿಲ್ಪಾ ಶಿರೋಡ್ಕರ್ ಉಪಸ್ಥಿತರಿದ್ದರು.
ಡಾ. ಶ್ರೇಯಾ ಸ್ವಾಗತಿಸಿದರು. ಡಾ. ಝೋಹಾ ತಾಜ್ ಮತ್ತು ಡಾ. ಲಾವಣ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಡಾ. ವರ್ಷಾ ವಂದಿಸಿದರು. ರಾಜ್ಯದಿಂದ ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.