ಮಂಗಳೂರು: ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯು ಕದ್ರಿಯ ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಆ.26ರಂದು ನಡೆಯಲಿದೆ.
ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (42ವರ್ಷ) ಕಲ್ಕೂರ ಪ್ರತಿಷ್ಠಾನ ನಡೆಸಿಕೊಂಡು ಬಂದಿರುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು 42 ವಿಭಾಗಗಳಲ್ಲಿ 9 ವೇದಿಕೆಗಳಲ್ಲಿ ಕೃಷ್ಣಾಷ್ಟಮಿಯಂದು ನಡೆಸಲಾಗುತ್ತಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9 ರಿಂದ ಶ್ರೀ ಕೃಷ್ಣ ವರ್ಣ ವೈಭವ, ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು, ಪುಟಾಣಿಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12 ಗಂಟೆ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 42 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿದೆ. ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.
ಮೂರು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳ ನಿರೀಕ್ಷೆ: ಈ ಬಾರಿಯ ಸ್ಪರ್ಧೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಶ್ರೀಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನವಾಗಿ ಸುಮಾರು 150ಕ್ಕೂ ಮಿಕ್ಕಿ ನಿತ್ಯ ಪೂಜಾ ಅಥವಾ ಸಾಂಸ್ಕೃತಿಕ ಪರಿಕರಗಳನ್ನು ನೀಡಲಾಗುತ್ತದೆ. 6 ತಿಂಗಳ ಶಿಶುವಿನಿಂದ ಹಿಡಿದು ಅಬಾಲವೃದ್ಧರ ವರೆಗೂ ವಿವಿಧ ಬಗೆಯ ಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧಾ ಸ್ಥಳದಲ್ಲೇ ಹೆಸರು ನೊಂದಾಯಿಸಲು ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ 0824-2492239, 9448125949 ಸಂಪರ್ಕಿಸಬಹುದು ಎಂದರು.
ಪ್ರೊ.ಎಂ.ಬಿ.ಪುರಾಣಿಕ್, ಕದ್ರಿ ನವನೀತ್ ಶೆಟ್ಟಿ, ಬಿ.ವಿಜಯಲಕ್ಷ್ಮಿ ಶೆಟ್ಟಿ, ಮಂಜುಳ ಶೆಟ್ಟಿ, ತಾರಾನಾಥ್ ಬೋಳಾರ್, ದಯಾನಂದ ಕಟೀಲ್, ತಮ್ಮ ಲಕ್ಷ್ಮಣ, ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ.ಭಟ್ ಸೇರಾಜೆ, ದಯಾನಂದ ಕಟೀಲ್, ಸಂಜನಾ ಭಟ್, ರತ್ನಾಕರ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧಾ ವಿಭಾಗಗಳು
ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾ ಮಾಧವ, ಯಶೋಧ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ (ಮುಕ್ತ ವಿಭಾಗ), ಯಕ್ಷ ಕೃಷ್ಣ, ನಂದ ಗೋಕುಲ (ಸಮೂಹ ವಿಭಾಗ), ಛಾಯಾಕೃಷ್ಣ, ಶ್ರೀ ಕೃಷ್ಣ ವೈಭವ ಚಿತ್ರಕಲೆ, ಅಚ್ಚುತ ರಸಪ್ರಶ್ನೆ ಲಿಖಿತ, ಮಾಧವ ರಸಪ್ರಶ್ನೆ ಲಿಖಿತ, ಕೇಶವ ರಸಪ್ರಶ್ನೆ ಲಿಖಿತ, ಪಂಡರಾಪುರ ವಿಠಲ (ನೃತ್ಯ ಭಜನಾ ಸ್ಪರ್ಧೆ), ಬಹು ಭಾಷಾ ಭಜನೆ ಭಕ್ತಿಗೀತೆ ರಚನೆ, ಬಹು ಭಾಷಾ ಕವಲ ರಚನೆ, ರಂಗೋಲಿಯಲ್ಲಿ ಶ್ರೀ ಕೃಷ್ಣ, ಕೃಷ್ಣ ಕಥಾ, ಆನ್‌ಲೈನ್ ವಿಭಾಗದಲ್ಲಿ ವೃಕ್ಷ ಕೃಷ್ಣ, ಗೋಪಾಲಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.