ಮಂಗಳೂರು: ಮಂಗಳೂರು ಜಂಕ್ಷನ್- ಯಶವಂತಪುರ ರೈಲು ಮಾರ್ಗದಲ್ಲಿ ರೈಲು ಪ್ರಯಾಣದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭವಾಗಿರುವ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲಿಗೆ ಭಾನುವಾರ ಚಾಲನೆ ಸಿಕ್ಕಿದೆ.
ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲ್ಘಾಟ್ ವಿಭಾಗ ಡಿಆರ್‌ಎಂ ತ್ರಿಲೋಕ್ ಕೊಠಾರಿ ಮೊದಲಾದವರಿದ್ದರು.
ವಿಸ್ಟಾ ಡೋಮ್ ಬೋಗಿಗಳ್ಳುಳ್ಳ ರೈಲು ದಕ್ಷಿಣ ಭಾರತದಲ್ಲಿ ರೈಲ್ವೆ ಇಲಾಖೆಯಿಂದ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಚಲಿಸುವ ಈ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಲಾದ ವಿಸ್ಟಾ ಡೋಮ್ ಬೋಗಿಗಳಲ್ಲಿರುವ ಪ್ರಯಾಣಿಕರು ರೈಲು ಪಶ್ಚಿಮಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ. ಎತ್ತರದ ಪರ್ವತಗಳ ಅದ್ಭುತ ನೋಟ, ಕಣಿವೆಗಳು, ಆಳವಾದ ಕಮರಿಗಳು ಮತ್ತು ಹಚ್ಚ ಹಸಿರಿನ ಈ ಪ್ರದೇಶವು ಮಾನ್ಸೂನ್‌ನಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳು ನೋಡುಗರನ್ನು ಬೆರಗುಗೊಳಿಸಿದೆ.
ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಹೊಂದಿದೆ, ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್‌ಎಚ್‌ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್‌ಫಾರ್ಮ್ / ತಂತ್ರಜ್ಞಾನ) ನಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟಗಳನ್ನು ನೀಡುತ್ತದೆ.
ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳಿವೆ. ಇದಲ್ಲದೆ, ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಗೃಹ ಹೊಂದಿದೆ.