ಮಂಗಳೂರು: ಅಮೃತ್ ಭಾರತ್ ಯೋಜನೆಯಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣಕ್ಕೆ ಆ.6ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಕಾರ್ಯಗತಗೊಳಿಸಲು ಮುಂದಾಗಿರುವ ಪ್ರಧಾನಿ ಹಾಗೂ ರೈಲ್ವೆ ಸಚಿವರನ್ನು ದಕ್ಷಿಣ ಕನ್ನಡ ಸಂಸದರು ಅಭಿನಂದಿಸಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸುಮಾರು 19.32 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ನಿಲ್ದಾಣವಾಗಿ ನಿರ್ಮಾಣವಾಗಲಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸಹಿತ ಮಂಗಳೂರು ಸೆಂಟ್ರಲ್ ನಿಲ್ದಾಣ, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಿಸಲಾಗಿತ್ತು.