ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಹಭಾಗಿತ್ವದಲ್ಲಿ ಸೌದಿ ಅರೇಬಿಯಾದ ಮೆಕ್ಕಾ ಪ್ರಾಂತ್ಯದ ಬಂದರು ನಗರ ಜೆಡ್ಡಾಗೆ ಸಾಪ್ತಾಹಿಕ ವಿಮಾನ ಸಂಪರ್ಕ ಕಲ್ಪಿಸಿದೆ.
ಪವಿತ್ರ ಇಸ್ಲಾಮಿಕ್ ತೀರ್ಥಯಾತ್ರೆಯಾದ ಉಮ್ರಾಗೆ ಹೊರಡುವ ಭಕ್ತಾದಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಮೊದಲ ದಿನ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸಿದರು. ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜೆಡ್ಡಾಗೆ ಪ್ರತಿ ಬುಧವಾರ ಮತ್ತು ಗುರುವಾರ ವಿಮಾನ ಹಾರಾಟ ನಡೆಸಲಿದೆ.
ವಿಮಾನ ನಿಲ್ದಾಣ ಅಧಿಕಾರಿ ಮುಖೇಶ್ ನಂಕಣಿ, ಕಸ್ಟಮ್ಸ್, ವಲಸೆ, ಸಿಐಎಫ್‌ನ ವಿಮಾನ ನಿಲ್ದಾಣ ಭದ್ರತಾ ಗುಂಪು ಮತ್ತು ವಿಮಾನ ನಿಲ್ದಾಣದ ವಿಭಾಗ ಮುಖ್ಯಸ್ಥರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಜೆಡ್ಡಾ ವಿಮಾನವನ್ನು ಹತ್ತಿದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ವತಿಯಿಂದ ಗುಲಾಬಿ, ಪ್ರಮಾಣಪತ್ರ ಮತ್ತು ವಿವಿಧ ಒಣ ಹಣ್ಣುಗಳ ಚೀಲವನ್ನು ನೀಡಲಾಯಿತು. ತಿರುಚಿರಾಪಳ್ಳಿಯಿಂದ ಆಗಮಿಸಿದ ಕ್ಯಾಪ್ಟನ್ ಅನ್ಮೋಲ್ ದೀಪ್ ಸಿನ್ ಪಡ್ಡಾ ನೇತೃತ್ವದ ಐಎಕ್ಸ್ 1499 ವಿಮಾನಕ್ಕೆ ವಿಮಾನ ನಿಲ್ದಾಣವು ಸಾಂಪ್ರದಾಯಿಕ ಸ್ವಾಗತ ನೀಡಿತು. ಕ್ಯಾಪ್ಟನ್ ಅನ್ಮೋಲ್ ನಂತರ ಹೊಸ ಸಿಬ್ಬಂದಿಯೊಂದಿಗೆ ಉದ್ಘಾಟನಾ ವಿಮಾನವನ್ನು ಜೆಡ್ಡಾಗೆ ಮುನ್ನಡೆಸಿದರು. ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜೆಡ್ಡಾಗೆ ಪ್ರತಿ ಬುಧವಾರ ತೆರಳಿ ಗುರುವಾರ ಹಿಂದಿರುಗಲಿದೆ.
ಬುಧವಾರ ತಿರುಚಿರಾಪಳ್ಳಿಯಿಂದ ಮಧ್ಯಾಹ್ನ 12.50ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಮಂಗಳೂರು ತಲುಪಲಿದೆ. 2.45ಕ್ಕೆ ಹೊರಟು 6.25ಕ್ಕೆ ಜೆಡ್ಡಾ ತಲುಪಲಿದೆ. ಮರುದಿನ ಸಂಜೆ 7.25ಕ್ಕೆ ಜೆಡ್ಡಾದಿಂದ ಹೊರಟು ಬೆಳಗ್ಗಿನ ಜಾವ 3.45ಕ್ಕೆ ಮಂಗಳೂರು ತಲುಪಲಿದೆ. ಬೆಳಗ್ಗೆ 5 ಗಂಟೆಗೆ ಹೊರಟು 6 ಗಂಟೆಗೆ ತಿರುಚಿರಾಪಳ್ಳಿಗೆ ತಲುಪಲಿದೆ.