ಜಿಲ್ಲೆ

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾರ್ವಜನಿಕರ ಜವಾಬ್ದಾರಿ ಮಹತ್ತರ ಸೈಬರ್ ಅಪರಾಧದ ಬಗ್ಗೆ ಅರಿವು ಹಾಗೂ ಜನ ಸಂಪರ್ಕ ಸಭೆಯಲ್ಲಿ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್

ಮಂಗಳೂರು: ಬೆರಳೆಣಿಕೆ ಜನರಿಂದಾಗಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುವಂತಹ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾರ್ವಜನಿಕರು ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸಿದರೆ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯ ಎಂದು ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಹೇಳಿದರು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ನೇತೃತ್ವದಲ್ಲಿ, ಭಾನುವಾರ ಹಿಂದೂ ಸೇವಾ ಸಮಿತಿ ಜಪ್ಪಿನಮೊಗರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗ ಪೊಲೀಸ್ ಉಪ ಆಯುಕ್ತ ಹಾಗೂ ಮಂಗಳೂರು ಕಂಕನಾಡಿ ನಗರ ಆರಕ್ಷಕ ಠಾಣೆಯ ಅಧಿಕಾರಿಗಳ ಸಹಕಾರದಲ್ಲಿ ‘ಸೈಬರ್ ಅಪರಾಧದ ಬಗ್ಗೆ ಅರಿವು ಹಾಗೂ ಜನ ಸಂಪರ್ಕ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.


ಸಾರ್ವಜನಿಕರು ಪೊಲೀಸ್ ಇಲಾಖೆಯ ಜತೆಗೆ ಸಹಕಾರ ನೀಡುತ್ತಿದ್ದರೆ ಸಮಾಜದಲ್ಲಿ ನಡೆಯಬಹುದಾದ ಯಾವುದೇ ಅಹಿತಕರ ಘಟನೆಗಳನ್ನು ತಡೆಹಿಡಿಯಲು ಸಾಧ್ಯ. ಸಮಾಜ ಒಗ್ಗಟ್ಟಾಗಿದ್ದರೆ ಶಾಂತಿ ಸಾಮರಸ್ಯ ಕಾಪಾಡಲೂ ಸಾಧ್ಯ. ಯಾವುದೇ ಸಮಸ್ಯೆ ಸವಾಲು ಜನರಿಗೆ ಇದ್ದರೆ ನಿರ್ಭೀತಿಯಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು ಎಂದರು.


ಮಂಗಳೂರು ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸ್ಥಳೀಯ ಮನಪಾ ಸದಸ್ಯೆ ವೀಣಾಮಂಗಳ, ಆತ್ಮಶಕ್ತಿ ವಿವಿದೋದ್ದೇಶ ಬ್ಯಾಂಕ್‌ನ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉದ್ಯಮಿ ರಾಜೇಶ್ ಶೆಟ್ಟಿ, ವಿಮಲಾ ಕೇಶವ, ಬಾಲಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ, ಜೆ.ಸುರೇಂದ್ರ, ಉದಯ ಕೊಟ್ಟಾರಿ, ಗಣೇಶ್ ಸಾಲ್ಯಾನ್, ಯೋಗೀಶ್ ರೈ ಕೆ., ಸುಧಾಕರ್.ಜೆ, ಕೊಣಾಜೆ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪುನೀತ್ ಗಾಂವ್ಕರ್, ಕಂಕನಾಡಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹುಸೈನ್ ಮುಂತಾದವರು ಉಪಸ್ಥಿತರಿದ್ದರು.


ಸಮಿತಿಯ ಅಧ್ಯಕ್ಷ ಮಾಜಿ ಕಾರ್ಪೋರೇಟರ್ ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಲಕ್ಷ್ಮೀಶ ಸುವರ್ಣ ನಿರೂಪಿಸಿದರು. ಸುಭಾಷ್ ವಿ.ಅಡಪ್ಪ ವಂದಿಸಿದರು.