ಮಂಗಳೂರು: ನಗರದ ಕಾರಾಗೃಹದಲ್ಲಿ ಕೈದಿಗಳು ಮತ್ತೆ ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಷೇಕ್ ಮತ್ತು ಸಮೀರ್ ಹೊಡೆದಾಡಿಕೊಂಡ ಆರೋಪಿಗಳು. ಜೈಲ್‌ನ ಎ ಬ್ಲಾಕ್‌ನ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ತಿರುಗಾಡುತ್ತಿದ್ದಾಗ ಅಭಿಷೇಕ್ ಮತ್ತು ಸಮೀರ್ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ವಾಗ್ವಾದ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಜೈಲು ಸಿಬ್ಬಂದಿ ಇಬ್ಬರನ್ನೂ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾರದಲ್ಲಿ 2ನೇ ಘಟನೆ: ಮಂಗಳೂರು ನಗರದ ಕಾರಾಗೃಹದಲ್ಲಿ ಕಳೆದ ಭಾನುವಾರ (ಏ.25ರಂದು) ಬೆಳಗ್ಗೆ ವಿಚಾರಣಾ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಗಲಾಟೆ ತಡೆಯಲು ಹೋದ ಜೈಲು ಸಿಬ್ಬಂದಿಗೂ ಹಲ್ಲೆ ನಡೆಸಲಾಗಿತ್ತು. ಇದೀಗ ಮತ್ತೆ ಕೈದಿಗಳ ಮಧ್ಯೆ ಹೊಡೆದಾಟ ನಡೆದಿದೆ.