ಹರೀಶ್ ಮೋಟುಕಾನ ಮಂಗಳೂರು
ಮಂಗಳೂರು ನಗರದಲ್ಲಿ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ಮನ ಬಂದಂತೆ ವಾಹನ ಚಾಲನೆ ಇನ್ನು ಸುಲಭವಿಲ್ಲ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್(ಐಟಿಎಂಎಸ್) ಶೀಘ್ರದಲ್ಲೇ ಜಾರಿಯಾಗಲಿದೆ. ದಿನದ 24 ಗಂಟೆಯೂ, ವರ್ಷದ 365 ದಿನಗಳಲ್ಲೂ ಈ ವ್ಯವಸ್ಥೆ ಕಾರ್ಯಾಚರಿಸಲಿದೆ.
ಬೆಂಗಳೂರು, ಮೈಸೂರು ಮೊದಲಾದ ಕಡೆ ಈಗಾಗಲೇ ಐಟಿಎಂಎಸ್ ವ್ಯವಸ್ಥೆ ಜಾರಿಯಲ್ಲಿದೆ. ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರು ನಗರದಲ್ಲಿ ಅಳವಡಿಕೆಯಾಗುತ್ತಿದೆ. ಮಂಗಳೂರು ನಗರದ 15 ಪ್ರಮುಖ ಜಂಕ್ಷನ್, ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆಗಸ್ಟ್ 1ರಿಂದ ಹೊಸ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆ ಇದೆ.
ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಕ್ಯಾಮರಾಗಳು ಏಳು ವಿಧದ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತವೆ. ಈ ವ್ಯವಸ್ಥೆ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾಗಳೊಂದಿಗೆ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುತ್ತದೆ. ಸ್ವಯಂಚಾಲಿತವಾಗಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ. ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೊಲೀಸರು ಎಷ್ಟೇ ನಿಗಾ ಇಟ್ಟರೂ ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತ ನಡೆದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ತಡೆಗಟ್ಟಿ, ಸುಗಮ ಸಂಚಾರಕ್ಕೆ ಈ ತಂತ್ರಜ್ಞಾನ ಮಹತ್ವ ಪಡೆದಿದೆ.
ಸ್ಮಾರ್ಟ್ ಸಿಟಿಯಿಂದ ವ್ಯವಸ್ಥೆ: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಎರಡನೇ ಹಂತದಲ್ಲಿ ಈ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಸ್ಮಾರ್ಟ್‌ಸಿಟಿಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನ ಮೊದಲ ಹಂತವನ್ನು 14 ಕೋಟಿ ರೂ. ವೆಚ್ಚದಲ್ಲಿ ರೂಪುಗೊಂಡಿದೆ. 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ 9 ಕೋಟಿ ರೂ. ಮೀಸಲಿರಿಸಲಾಗಿದೆ. ಎರಡನೇ ಹಂತವನ್ನು 19 ಕೋಟಿ ರೂ.ಗಳ ಯೋಜನೆ ಮತ್ತು 5 ವರ್ಷಗಳ ಕಾರ್ಯಾಚರಣೆಗೆ 9 ಕೋಟಿ ರೂ. ಮೀಸಲಿರಿಸಲಾಗಿದೆ.
ನಂಬರ್ ಪ್ಲೇಟ್ ಸ್ಕಾೃನ್
ಮಿತಿ ಮೀರಿದ ವೇಗ, ಸಿಗ್ನಲ್ ಜಂಪ್ ಮಾಡಿದರೆ, ಹೆಲ್ಮೆಟ್ ಧರಿಸದಿದ್ದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ತ್ರಿಬಲ್ ರೈಡ್, ಸೀಟು ಬೆಲ್ಟ್ ಧರಿಸದಿದ್ದರೆ…ಹೀಗೆ ನಾನಾ ಟ್ರಾಫಿಕ್ ನಿಯಮ ಉಲ್ಲಂಘನೆಯಾದಾಗ ಅತ್ಯಾಧುನಿಕ ಕ್ಯಾಮರಾದಲ್ಲಿ ನಂಬರ್ ಪ್ಲೇಟ್ ಸ್ಕಾೃನ್ ಆಗುತ್ತದೆ. ಇದು ಕಮಾಂಡ್ ಕಂಟ್ರೋಲ್ ರೂಂನಿಂದ ಸಂಚಾರಿ ಪೊಲೀಸರಿಗೆ ರವಾನೆಯಾಗಿ, ತಕ್ಷಣವೇ ನಿಯಮ ಉಲ್ಲಂಘಿಸಿದವರ ಮೊಬೈಲ್‌ಗೆ ನೋಟಿಸ್ ಹಾಗೂ ಎಸ್‌ಎಂಎಸ್ ರವಾನಿಸಲಾಗುತ್ತದೆ.
ಸ್ಮಾರ್ಟ್ ಸಿಟಿ ಯೋಜನೆಯಿಂದ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಕೆಯಾಗುತ್ತಿದೆ. ನಗರದಲ್ಲಿ ಕ್ಯಾಮರಾ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರ ನೂತನ ಸಂಚಾರ ವ್ಯವಸ್ಥೆ ಜಾರಿಗೆ ತರಲು ಶ್ರಮಿಸಲಾಗುತ್ತಿದೆ. ನಗರ ಸಂಚಾರ ಪೊಲೀಸರಿಗೆ ಇಂತಹ ಹೊಸ ಯೋಜನೆಗಳಿಂದ ಹೆಚ್ಚಿನ ಅನುಕೂಲವಾಗಲಿದೆ.
ರಾಜು ಕೆ
ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್ ಸಿಟಿ