ಜಿಲ್ಲೆ

ಮಂಗಳೂರು ಅಡಕೆ ಸುಪಾರಿ ಕಂಪೆನಿಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ

ಮಂಗಳೂರು: ತೆರಿಗೆ ತಪ್ಪಿಸಿ ಅಕ್ರಮ ಲಾಭ ಮಾಡುತ್ತಿರುವ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ ನಾಲ್ಕು ಅಡಕೆ ಸುಪಾರಿ ಕಂಪೆನಿಗಳಿಗೆ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.

ಕಾರ್‌ಸ್ಟ್ರೀಟ್ ಬಳಿ ಜತೆಯಾಗಿರುವ ಸ್ವಸ್ತಿಕ್ ಟ್ರೇಡಿಂಗ್ ಕಂಪೆನಿ, ಪರಮೇಶ್ವರಿ ಟ್ರೇಡಿಂಗ್ ಕಂಪೆನಿ ಮತ್ತು ನರೇಶ್ ಆ್ಯಂಡ್ ಕಂಪೆನಿ ಹಾಗೂ ಶಿವ್ ಪ್ರೇಮ್ ಟ್ರೇಡರ್ಸ್‌ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕಂಪೆನಿ ಮೂಲಕ ಅಡಕೆ ಸುಪಾರಿ, ಗುಟ್ಕಾ ಪಾನ್ ಮಸಾಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತರ ಭಾರತಕ್ಕೆ ಪೂರೈಕೆ ಮಾಡುತ್ತಿದ್ದರು. ಬಿಹಾರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಇವರ ಮಾರುಕಟ್ಟೆ ವಿಸ್ತರಣೆಗೊಂಡಿತ್ತು. ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುತ್ತಿದ್ದ ಅವರು ತೆರಿಗೆ ತಪ್ಪಿಸಲು ಅನಧಿಕೃತವಾಗಿ ಮಾರಾಟ ವಹಿವಾಟು ನಡೆಸುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇಲಾಖೆ ಅಧಿಕಾರಿಗಳು ಟ್ರೇಡಿಂಗ್ ಕಂಪೆನಿಗಳಿಗೆ ಹಾಗೂ ಮಾಲೀಕರ ಮನೆಗಳಿಗೂ ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ಟ್ರೇಡಿಂಗ್ ಕಂಪೆನಿ ಮತ್ತು ನರೇಶ್ ಆ್ಯಂಡ್ ಕಂಪೆನಿ ಮಾಲೀಕರಾದ ಸತ್ಯೇಂದ್ರ ಶರ್ಮಾ ಹಾಗೂ ಶಿವಕುಮಾರ್ ಶರ್ಮಾ ಅವರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ಒಟ್ಟು ಎಷ್ಟು ಮೌಲ್ಯದ ಚಿನ್ನಾಭರಣ ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ.

ಕರಾವಳಿ ಭಾಗದಲ್ಲಿ ಉತ್ಪಾದನೆಯಾಗುವ ಅಡಕೆಯನ್ನು ಗುಜರಾತಿ ವ್ಯಾಪಾರಿಗಳು ಖರೀದಿಸಿ ಉತ್ತರ ಭಾರತಕ್ಕೆ ರವಾನೆ ಮಾಡುತ್ತಾರೆ. ತಮ್ಮದೇ ಪಾನ್ ಮಸಾಲ ರೀತಿಯ ಉತ್ಪನ್ನಗಳನ್ನು ತಯಾರಿಸಿ ಚಿಲ್ಲರೆ ಮಾರಾಟ ಮಾಡುತ್ತಾರೆ. ಇವೆಲ್ಲವನ್ನು ನಗದು ರೂಪದಲ್ಲಿ ನಡೆಸಿ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ವಂಚಿಸುತ್ತಿದ್ದರು ಎಂದು ಇಲಾಖೆ ಮೂಲಗಳು ತಿಳಿಸಿವೆ.