ಮಂಗಳೂರು : ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯು 94 ವರ್ಷಗಳ ಇತಿಹಾಸ ಹೊಂದಿದ್ದು, ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ ವಿವಿಧ ಜನಪರ ಸೇವಾ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರ ಹಮ್ಮಿಕೊಂಡು ಯಶಸ್ಸು ಸಾಧಿಸಬೇಕೆಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರೋ ಚಾನ್ಸಲರ್ ಡಾ. ಶಾಂತರಾಮ ಶೆಟ್ಟಿ ಸಲಹೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಪದಾಧೀಕರಣದ ವಿವಿಧ ವಿಧಿವಿಧಾನವನ್ನು ನೆರವೇರಿಸಿ ವೈದ್ಯರು ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ, ನಗರದ ಬಹ್ರ್ಮಕುಮಾರಿ ಕೇಂದ್ರ ಸಂಸ್ಥೆಯ ಮುಖ್ಯಸ್ಥೆ ವಿಶ್ವೇಶ್ವರಿ, ನಗರದ ನೂರ್ ಅರಬಿಕ್ ಶಾಲೆಯ ವಿಭಾಗೀಯ ಮುಖ್ಯಸ್ಥ ಮಹಮ್ಮದ್ ಫರಾಹನ್ ನೆಡ್ವಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು.
ನೂತನ ಅಧ್ಯಕ್ಷ ಡಾ.ಜೆಸ್ಸಿ ಮಾರಿಯ ಗೋವಿಯಸ್ ಡಿಸೋಜ ಮಾತನಾಡಿ, ಈ ಹುದ್ದೆಯು ಸವಾಲುಗಳನ್ನು ಹೊಂದಿದ್ದು, ಜವಾಬ್ದಾರಿಯುತವಾಗಿದೆ. ಅಧಿಕಾರವಾಧಿಯಲ್ಲಿ ಹಲವಾರು ಸಮಾಜ ಸೇವಾ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವಸದಸ್ಯರ ಪ್ರೋತ್ಸಾಹ ಮತ್ತು ಒಗ್ಗಟ್ಟಿನ ಬೆಂಬಲ ಕೋರಿದರು.
ನಿರ್ಗಮನ ಅಧ್ಯಕ್ಷ ಡಾ.ರಂಜನ್ ಸ್ವಾಗತಿಸಿ, ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಡಾ.ಅವಿನ್ ಆಳ್ವ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ನಿರ್ಗಮನ ಕೋಶಾಧಿಕಾರಿ ಡಾ.ಪ್ರಶಾಂತ್, ನಿರ್ಗಮನ ಮಹಿಳಾ ವೈದ್ಯೆಯರ ಸಂಘದ ಅಧ್ಯಕ್ಷೆ ಡಾ. ಪ್ರಭಾ ಅಧಿಕಾರಿ, ನೂತನ ಅಧ್ಯಕ್ಷೆ ಡಾ. ಮೀರಾ ರಾವ್, ನೂತನ ಕೋಶಾಧಿಕಾರಿ ಡಾ.ಮಧುಸೂಧನ್ ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿ ಡಾ.ಅರ್ಚನಾ ಭಟ್ ವಂದಿಸಿದರು. ದೀಪಕ್ ಗಂಗೊಳ್ಳಿ, ಡಾ. ತಾನಿಯ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.