ಜಿಲ್ಲೆ

ಮೂಡುಬಿದಿರೆ ಘಟಕದ ಗೃಹರಕ್ಷಕರಿಗೆ ಪದೋನ್ನತಿ ಆದೇಶ ಪತ್ರ ಹಸ್ತಾಂತರ

ಮಂಗಳೂರು: ಮೂಡುಬಿದಿರೆ ಘಟಕದ ಗೃಹರಕ್ಷಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಪದೋನ್ನತಿ ಆದೇಶ ಪತ್ರವನ್ನು ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ವಿತರಿಸಿದರು.

ಗೃಹರಕ್ಷಕರಾದ ಲಾರೆನ್ಸ್ ಡಿಸೋಜ ಅವರನ್ನು ಸೆಕ್ಷನ್ ಲೀಡರ್ (ಎಸ್‌ಎಲ್) ನಿಂದ ಸಾಜೆರ್ಂಟ್ ಹುದ್ದೆಗೆ, ಚಂದ್ರಶೇಖರ್ ಅವರನ್ನು ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‌ಎಲ್) ನಿಂದ ಸೆಕ್ಷನ್ ಲೀಡರ್ ಹುದ್ದೆಗೆ ಹಾಗೂ ಗೃಹರಕ್ಷಕ ಮೆಲ್ವಿನ್ ರೊಸಾರಿಯೋ, ಆನಂದ ನಾಯ್ಕ, ಹಾಗೂ ರಾಮಚಂದ್ರ ನಾಯ್ಕ ಅವರುಗಳನ್ನು ಗೃಹರಕ್ಷಕ ಹುದ್ದೆಯಿಂದ ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‌ಎಲ್) ಹುದ್ದೆಗೆ ಪದೋನ್ನತ್ತಿ ನೀಡಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಇವರು ಗೃಹರಕ್ಷಕದಳ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರ ಸೇವೆಯನ್ನು ಗುರುತಿಸಿ ಕಾಲ ಕಾಲಕ್ಕೆ ಅವರಿಗೆ ಪದೋನ್ನತಿ ನೀಡುವುದು ನಮ್ಮ ಇಲಾಖೆಯ ಕರ್ತವ್ಯ. ಯಾವುದೇ ಫಲಾಪೇಕ್ಷೆ ಇಲ್ಲದೆ ನಿಷ್ಕಾಮ ಸೇವೆ ಸಲ್ಲಿಸುತ್ತಾ ಕನಿಷ್ಠ ಗೌರವಧನಕ್ಕೆ ಕೆಲಸ ಮಾಡುವ ಗೃಹರಕ್ಷಕರಿಗೆ ಕಾಲಕಾಲಕ್ಕೆ ಸಿಗಬೇಕಾದ ಪದೋನ್ನತಿಯನ್ನು ಕೊಟ್ಟರೆ ಅವರಿಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಹುಮ್ಮಸ್ಸು, ಪ್ರೋತ್ಸಾಹ ಸಿಗುತ್ತದೆ ಎಂದು ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.

ಮೂಡುಬಿದಿರೆ ಘಟಕದ ಪ್ರಭಾರ ಘಟಕಾಧಿಕಾರಿ ಚಂದ್ರಶೇಖರ್, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಗೃಹರಕ್ಷಕರಾದ ಮಂಗಳೂರು ಘಟಕದ ಸಂಜಯ್ ಶೆಣೈ, ರೇಣುಕಾ, ಸುಲೋಚನಾ, ಖತೀಜಮ್ಮ, ಮಂಜುಳಾ ಮತ್ತು ಪುಷ್ಪರಾಜ್ ಮುಂತಾದವರು ಉಪಸ್ಥಿತರಿದ್ದರು.