ಜಿಲ್ಲೆ

ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಕಲ್ಪ ಮಾಡಬೇಕಿದೆ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಪ್ರಣವ ಮಲ್ಯ

ಮಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರತಿಯೊಬ್ಬ ಹಿಂದೂ ಕೂಡ ಸಂಕಲ್ಪ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಕರೆ ನೀಡಿದ್ದಾರೆ.

ಬಜಾಲ್‌ನ ಕಾವು ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಬದುಕಿರಲು ಸಾಧ್ಯ. ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರದ ಸದ್ಯದ ಅವಶ್ಯಕತೆಯಾಗಿದೆ ಎಂದರು.

ಆಧ್ಯಾತ್ಮಿಕ ಪ್ರಚನಕಾರ ಉಡುಪಿಯ ನಟರಾಜ ಭಟ್ ಮಾತನಾಡಿ, ಜಾತಿಯ ಹೆಸರಿನಲ್ಲಿ ಬೇರೆ ಆಗುವ ಬದಲು ಹಿಂದೂ ಧರ್ಮದ ಅಡಿಯಲ್ಲಿ ಸಂಘಟಿತರಾಗಿ ಧರ್ಮಾಚರಣೆ ಮಾಡಬೇಕು ಮತ್ತು ಧರ್ಮದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.

ಸನಾತನ ಸಂಸ್ಥೆಯ ವಕ್ತಾರರಾದ ಲಕ್ಷ್ಮೀ ಪೈ ಮಾತನಾಡಿ, ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ ಎಂದರು.

ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಆಳ್ವ, ಮಾಜಿ ಅಧ್ಯಕ್ಷ ಕಿರಣ್ ರೈ, ಸೂರ್ಯ ನಾರಾಯಣ ದೇವಸ್ಥಾನದ ಅಧ್ಯಕ್ಷ ಗಣೇಶ ಶೆಟ್ಟಿ, ಮನಪಾ ಸದಸ್ಯರಾದ ಶೋಭಾ ಪೂಜಾರಿ ಮತ್ತು ವೀಣಾ ಮಂಗಲ ಉಪಸ್ಥಿತರಿದ್ದರು.

ಸುಮಾರು 250 ಕೂ ಅಧಿಕ ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ವಿವೇಕ್ ಪೈ ಪ್ರಸ್ತಾವನೆಗೈದರು.