ಮಂಗಳೂರು: ನನಗೂ ಮಂಗಳೂರಿಗೂ ಅವಿನಾವಭಾವ ಸಂಬಂಧ. ನನ್ನ ಮೊದಲ ಚಿತ್ರದ ನಿರ್ಮಾಪಕ ಮಂಗಳೂರಿನ ಜಗದೀಶ್ ಕೋಟ್ಯಾನ್. ಸಂಗೀತ ನಿರ್ದೇಶಕರು ಮಂಗಳೂರಿನವರು. ನಾನು ಮದುವೆ ಆದದ್ದು ಮಂಗಳೂರಿನವರನ್ನು. ಹಾಗಾಗಿ ಮಂಗಳೂರಿಗೆ ಬರುವುದೆಂದರೆ ತುಂಬಾ ಖುಷಿ ಎಂದು ಚಿತ್ರನಟ, ಗೋಲ್ಡನ್‌ಸ್ಟಾರ್ ಗಣೇಶ್ ಹೇಳಿದರು.
ಗೋಲ್ಡನ್ ಮೂವೀಸ್ ನಿರ್ಮಾಣದಲ್ಲಿ ಸಿದ್ದವಾಗುವ ಮೊದಲ ತುಳು ಸಿನೆಮಾಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಗುರುವಾರ ಮುಹೂರ್ತ ನೆರವೇರಿಸಿ ಮಾತನಾಡಿದ ಅವರು, ‘ತುಳು ಒಂತೆ ಒಂತೆ ಅತ್ತ್ ಪೂರ ಬರ್ಪುಂಡ್; ಸೋಕು ಅರ್ತ ಆಪುಂಡು’ ಎಂದು ತುಳುವಿನಲ್ಲೇ ಮಾತು ಆರಂಭಿಸಿದರು.
ನನ್ನ ಪತ್ನಿ ಶಿಲ್ಪಾಳಿಗೆ ಅವರ ಮಾತೃ ಭಾಷೆ ತುಳುವಿನಲ್ಲಿ ಸಿನೆಮಾ ಮಾಡಬೇಕು ಎಂಬ ಆಸೆ ಇತ್ತು. ನನಗೂ ಕನಸು ಇತ್ತು. ನಮ್ಮಿಬ್ಬರ ಕನಸು ಈಗ ನನಸಾಗುತ್ತಿದೆ ಎಂದರು.
ತುಳುನಾಡಿನ ಕೌಟುಂಬಿಕ ಕಥೆಯಾಧಾರಿತ ಸಿನೆಮಾ ಇದು. ನಮ್ಮ ನಿರೀಕ್ಷೆಗೂ ಮೀರಿ ಉತ್ತಮವಾಗಿ ಸಿನೆಮಾ ಬರಲಿದೆ. ಚಿತ್ರದ ಬಹುತೇಕ ಶೂಟಿಂಗ್ ಕರಾವಳಿ ಭಾಗದಲ್ಲೇ ನಡೆಯಲಿದೆ. ನಾನೂ ಅತಿಥಿ ಪಾತ್ರದಲ್ಲಿದ್ದೇನೆ ಎಂದರು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೋ, ಮೇಯರ್ ಮನೋಜ್ ಕುಮಾರ್, ಪ್ರಮುಖರಾದ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಶೆಟ್ಟಿ, ದೇವಸ್ಥಾನದ ಪ್ರಮುಖರಾದ ಹೆಚ್.ಎಸ್. ಸಾಯಿರಾಂ, ಮಾಧವ ಸುವರ್ಣ, ಶೇಖರ್ ಪೂಜಾರಿ, ಬಿ. ರವೀಂದ್ರ ಶೆಟ್ಟಿ, ಚಿತ್ರದ ಶಿಲ್ಪಾ ಗಣೇಶ್, ನಿರ್ದೇಶಕ ಸಂದೀಪ್ ಬೆದ್ರ, ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್ ಸಹಿತ ಕಲಾವಿದರು ಉಪಸ್ಥಿತರಿದ್ದರು.