ಜಿಲ್ಲೆ

ಚಿನ್ನಾಭರಣ ಕಳವು ಆರೋಪಿ ಮೂರು ವರ್ಷದ ಬಳಿಕ ಬಂಧನ ಕಂಕನಾಡಿ ನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಕುಲಶೇಖರದ ಮನೆಯೊಂದರಿಂದ 2021ರಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣ ಆರೋಪಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕಾರ್ಕಳ ಬೆಳ್ಮಣ್ ಮಟ್ಕಕೆರೆ ಹೌಸ್ ರೋಹಿತ್ ಮಥಾಯಿಸ್ ಬಂಧಿತ ಆರೋಪಿ. ಈತನ ಬಳಿಯಿಂದ ಕಳವು ಮಾಡಿದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.


ಕುಲಶೇಖರದ ಮಹಿಳೆಯೊಂದಿಗೆ ವಾಸಮಾಡಿಕೊಂಡಿದ್ದ ಆರೋಪಿ 2021 ನೇ ಡಿಸೆಂಬರ್ ತಿಂಗಳಿನ ಮೊದಲನೇ ವಾರದಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಆರೋಪಿತ ರೋಹಿತ್ ಮಥಾಯೀಸ್ ಸಹಚರರೊಂದಿಗೆ ಸೇರಿ 2019 ರಲ್ಲಿ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯ ನಿವೃತ್ತ ಪಿ.ಡಿ.ಒ. ಭರತಲಕ್ಷ್ಮೀ ಎಂಬವರನ್ನು ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋದ ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನು ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ನಗದು ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗುವ ಸ್ವಭಾವದವನಾಗಿದ್ದಾನೆ. ಈ ಪ್ರಯತ್ನದಲ್ಲಿರುವಾಗಲೇ ಕಂಕನಾಡಿ ನಗರ ಪೊಲೀಸರು ಮಾಹಿತಿಗಳ ಆಧಾರದಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.


ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ರವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೊಗೀಶ್ವರನ್ ಹಾಗೂ ಹೆಚ್.ಸಿ. ಜಯಾನಂದ ಮತ್ತು ಸಿಬ್ಬಂದಿ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.