ಜಿಲ್ಲೆ

ಗ್ಯಾರಂಟಿ ಯೋಜನೆ ಗ್ರಾಪಂ ಮಟ್ಟದಲ್ಲಿ ನೋಡೆಲ್ ಅಧಿಕಾರಿ ನೇಮಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಾ.ಪುಷ್ಪಾ ಅಮರನಾಥ್ ಮಾಹಿತಿ

ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಯಾರೊಬ್ಬ ಅರ್ಹ ಫಲಾನುಭವಿಯೂ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.


ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ರಾಜ್ಯದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಗ್ಯಾರಂಟಿ ಯೋಜನೆಗಳು ಬಹುತೇಕ ಫಲಾನುಭವಿಗಳನ್ನು ತಲುಪಿದೆ. ತಾಂತ್ರಿಕ ಕಾರಣಗಳಿಂದ ಕೆಲವು ಮಂದಿಗೆ ಇನ್ನೂ (ಮುಖ್ಯವಾಗಿ ಗೃಹಲಕ್ಷ್ಮೀ) ತಲುಪಿಲ್ಲ. ಬಡವರ ಸ್ವಾಭಿಮಾನ ಮತ್ತು ಉದ್ಧಾರಕ್ಕಾಗಿ ಇರುವ ಯೋಜನೆಯನ್ನು ಪ್ರತಿ ಅರ್ಹರನ್ನು ಪತ್ತೆ ಹಚ್ಚಿ ನೀಡಲಿದ್ದೇವೆ. ಗ್ರಾಪಂ ಮಟ್ಟದಲ್ಲಿ ಮಾತ್ರವಲ್ಲ, ಬೂತ್ ಮಟ್ಟದಲ್ಲೂ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.


ಶೇ.92 ಜನರಿಗೆ ಗೃಹಲಕ್ಷ್ಮೀ
ಗೃಹಲಕ್ಷ್ಮೀ ಯೋಜನೆಯಡಿ ರೇಶನ್ ಕಾರ್ಡ್‌ಗಳ ಆಧಾರದಲ್ಲಿ ಪ್ರತಿ ಜಿಲ್ಲೆಯಲ್ಲೂ ಫಲಾನುಭವಿಗಳನ್ನು ಗುರುತಿಸಿ ಗುರಿ ನಿಗದಿಪಡಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಹೀಗೆ ಗುರುತಿಸಲಾದ ಒಟ್ಟು 4,03,333 ಮಹಿಳೆಯರಲ್ಲಿ ಶೇ.92ರಷ್ಟು ಮಂದಿಗೆ (3,69,292) 2 ಸಾವಿರ ರೂ. ತಲುಪುತ್ತಿದೆ. ತಮಗೆ ಅಗತ್ಯ ಇಲ್ಲ ಎಂಬ ಕಾರಣಕ್ಕೋ, ಮಾಹಿತಿ ಕೊರತೆಯಿಂದಲೋ ಅಥವಾ ಭೌತಿಕವಾಗಿ ಬಂದು ಅರ್ಜಿ ಹಾಕಲು ಸಾಧ್ಯವಿಲ್ಲದೆ ಉಳಿದವರು ಇರಬಹುದು. ಅವರೆಲ್ಲರನ್ನು ಹುಡುಕಿ ಗೃಹಲಕ್ಷ್ಮೀಗೆ ನೋಂದಣಿ ಮಾಡಿಸಿ ಶೇ.100ರಷ್ಟು ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.


ಸಮಸ್ಯೆಗೆ ಪರಿಹಾರ:
ಗೃಹ ಸಾಲ ಇತ್ಯಾದಿ ಸಾಲ ಪಡೆದುಕೊಂಡವರು ಆದಾಯ ತೆರಿಗೆ ಪಾವತಿದಾರರು ಎಂದು ಆನ್‌ಲೈನ್‌ನಲ್ಲಿ ತಾನಾಗೇ ನಮೂದಾಗುತ್ತಿದೆ. ಇದರಿಂದ ಅನೇಕರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆ ನೀಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಅನೇಕರಿಗೆ ಬೆರಳಚ್ಚು ಮ್ಯಾಚ್ ಆಗದೆ ಸಮಸ್ಯೆಯಾಗಿದೆ. ಬೆರಳಚ್ಚು ಮ್ಯಾಚ್ ಆಗದೆ ಇದ್ದರೂ ಅಕ್ಕಿ ನೀಡಲು ಸೂಚನೆ ನೀಡಲಾಗಿದೆ. ಅಂಥ ಫಲಾನುಭವಿಗಳ ಕಣ್ಣಿನ ರೆಟಿನಾ ಸ್ಕ್ಯಾನ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಪುಷ್ಪಾ ಅಮರನಾಥ್ ಹೇಳಿದರು.


170 ಸರ್ಕಾರಿ ಬಸ್‌ಗಳ ಬೇಡಿಕೆ:
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ದ.ಕ. ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಮಹಿಳೆಯರಿಗೆ ತಲುಪುತ್ತಿದೆ. ಆದರೆ ಅನೇಕ ಕಡೆ ಸರ್ಕಾರಿ ಬಸ್ಸುಗಳಿಲ್ಲ ಎಂಬ ಕೂಗು ಇದೆ. ಜಿಲ್ಲೆಯಲ್ಲಿ ಹೊಸದಾಗಿ 170 ರೂಟ್‌ಗಳಿಗೆ ಸರ್ಕಾರಿ ಬಸ್ಸು ಓಡಿಸುವ ಬೇಡಿಕೆಯಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಬಳಿ ಮಾತುಕತೆ ನಡೆಸಲಾಗುವುದು ಎಂದರು.


ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ.ಆನಂದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಇದ್ದರು.