| ಪ್ರಕಾಶ್ ಮಂಜೇಶ್ವರ ಮಂಗಳೂರು
ಅಬುಧಾಬಿಯಿಂದ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು 450 ದಿರ್ಹಾಂ (9,450 ರೂಪಾಯಿ) ಪ್ರಯಾಣ ಟಿಕೆಟ್ ದರ. ಆದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು 850 ದಿರ್ಹಾಂ (17,850 ರೂಪಾಯಿ). ಅಂದರೆ, ಮಂಗಳೂರಿನ ಪ್ರಯಾಣಿಕರು ಹೆಚ್ಚು ಕಡಿಮೆ ದುಪ್ಪಟ್ಟು ದರ ಪಾವತಿಸಬೇಕು.
ಇದೊಂದು ಉದಾಹರಣೆ ಮಾತ್ರ. ಅರಬ್ ರಾಷ್ಟ್ರಗಳಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯಿದು. ಪ್ರಯಾಣ ದರದ ಈ ಭಾರಿ ವ್ಯತ್ಯಾಸದ ಬಗ್ಗೆ ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಅನಿವಾಸಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳಕ್ಕೆ ಪ್ರತಿದಿನ ವಿಮಾನ ಹಾರಾಟವಿದ್ದರೆ, ಮಂಗಳೂರಿಗೆ ವಾರಕ್ಕೆ ಮೂರ್ನಾಲ್ಕು ಹಾರಾಟ ಮಾತ್ರ ಲಭ್ಯ. ವಿಮಾನ ಸೇವೆಯಲ್ಲೂ ಮಂಗಳೂರಿಗೆ ಅನ್ಯಾಯವಾಗುತ್ತಿದೆ ಎಂಬುದು ದೂರು.
ಪರಿಣಾಮ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಭಾಗದ ಕನ್ನಡಿಗರು ಕಣ್ಣೂರು ನಿಲ್ದಾಣವನ್ನು ಅವಲಂಬಿಸಲು ಆರಂಭಿಸಿದ್ದಾರೆ. ಇದರಿಂದ ಮಂಗಳೂರು ವಿಮಾನ ಯಾನದ ದಟ್ಟಣೆ ಕಡಿಮೆ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವಿಮಾನ ಯಾನ ದ್ವಿಮುಖ ದರ ನಿಯಮಗಳಿಂದ ಸಮಸ್ಯೆಯಾಗಿದೆ ಎಂದು ಉದ್ಯಮಿ, ಅನಿವಾಸಿ ಭಾರತೀಯ ಸರ್ವೋತ್ತಮ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೇರಳದ ರಾಜಕೀಯ ನೇತಾರರ ದೂರಗಾಮಿ ಧೋರಣೆಯಿಂದಾಗಿ ಹೆಚ್ಚಿನ ವಿಮಾನಯಾನ ಸವಲತ್ತುಗಳು ಅವರ ಪಾಲಾಗುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಅದರಲ್ಲೂ ಕರಾವಳಿ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಅನಿವಾಸಿಗಳು ದುಬಾರಿ ಬೆಲೆ ತೆತ್ತು ಅನಿವಾರ್ಯವಾಗಿ ಪ್ರಯಾಣಿಸುವ ದುಃಸ್ಥಿತಿ ಬಂದೊದಗಿದೆ. ನಮ್ಮ ಮಂತ್ರಿಗಳು, ಶಾಸಕರು ಈ ವಿಷಯದಲ್ಲಿ ಗಮನವಿಟ್ಟು ಈ ವಿಪರೀತ ದರ ವ್ಯತ್ಯಾಸದ ಅನ್ಯಾಯವನ್ನು ಶೀಘ್ರವಾಗಿ ಸರಿಪಡಿಸಬೇಕು. ಅನಿವಾಸಿಗಳ ಸಂಕಷ್ಟ ನಿವಾರಣೆಗೆ ತುರ್ತಾಗಿ ಕಾರ್ಯೋನ್ಮುಖರಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಉಡಾನ್ ಯೋಜನೆ ಕಾರಣ: ಕೇಂದ್ರದ ಉಡಾನ್ ಯೋಜನೆಯಲ್ಲಿ ಸಹಾಯಧನ ಪಡೆಯುವ ವಿಮಾನ ನಿಲ್ದಾಣಗಳಿಗೆ ಕಡಿಮೆ ದರದಲ್ಲಿ ವಿಮಾನ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಕಣ್ಣೂರು ನಿಲ್ದಾಣ ಈ ಯೋಜನೆ ವ್ಯಾಪ್ತಿಯಲ್ಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಸೌಲಭ್ಯ ಇಲ್ಲದೆ ಇರುವುದರಿಂದ ಪ್ರಯಾಣ ಟಿಕೆಟ್ ದರ ಸ್ವಲ್ಪ ದುಬಾರಿಯಾಗಿದೆ ಎಂದು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ತಿಳಿಸಿದ್ದಾರೆ.