ಜಿಲ್ಲೆ

ಮೀನುಗಾರಿಕ ಸಚಿವರಿಂದ ಕುಳಾಯಿ ಜೆಟ್ಟಿ ಕಾಮಗಾರಿ ವೀಕ್ಷಣೆ

ಮಂಗಳೂರು: ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿ ಕಾಮಗಾರಿಯನ್ನು ಶನಿವಾರ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು, ಶಾಸಕ ಡಾ. ವೈ. ಭರತ್ ಶೆಟ್ಟಿ ಅವರೊಂದಿಗೆ ತೆರಳಿವೀಕ್ಷಿಸಿದರು.


ಶಾಸಕರು ಕಾಮಗಾರಿಯ ಕುರಿತಂತೆ ಸಚಿವರಿಗೆ ಮಾಹಿತಿ ನೀಡಿ ನಾಡದೋಣಿ ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭ ನವಮಂಗಳೂರು ಬಂದರು ಅಧಿಕಾರಿಗಳಿಂದ ಕಾಮಗಾರಿಯ ಕುರಿತಂತೆ ಸಮಗ್ರ ವರದಿ ಪಡೆದರು. ಮೀನುಗಾರರ ಅಹವಾಲು ಆಲಿಸಿದ ಬಳಿಕ ನಾಡ ದೋಣಿ ಹಾಗೂ ಯಾಂತ್ರಿಕ ಮೀನುಗಾರಿಕೆಗೆ ಅನುಕೂಲ ಆಗುವ ನಿಟ್ಟಿ ನಲ್ಲಿ ಕಿರು ಜಟ್ಟಿ ನಿರ್ಮಾಣ ಆಗಬೇಕಿದೆ. ಮೀನುಗಾರಿಕೆಗೆ ಅನುಕೂಲಕರ ವಲ್ಲದ ಕಾಮಗಾರಿಯನ್ನು ನಿಲ್ಲಿಸಿ , ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಕೂಡದು ಎಂದು ಸೂಚನೆ ನೀಡಿದರು.


ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ವೇದಾವತಿ, ಸುಮಿತ್ರ ಕೆ., ನಯನ ಆರ್ ಕೋಟ್ಯಾನ್, ನಾಡದೋಣಿ ಮೀನುಗಾರಿಕೆ ಸಂಘಟನೆ ಅಶ್ವಥ್ ಕಾಂಚನ್, ರಾಜೇಶ್ ಸಾಲ್ಯಾನ್ ಬೈಕಂಪಾಡಿ, ಚಂದ್ರಶೇಖರ್ ಗುಡ್ಡೆಕೊಪ್ಲ, ಸುಧೀರ್ ಶ್ರೆಯಾನ್ , ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಪಾಲಿಕೆ ಮಾಜಿ ನಾಮನಿರ್ದೇಸಿತ ಸದಸ್ಯ ಕುಮಾರ್ ಮೆಂಡನ್, ಯುವಮೊಗವೀರ ಮುಂದಾಳು ರವಿ ಶ್ರೆಯಾನ್, ವಿಜಯ್ ಅರಾನಾ, ಗೋವರ್ದನ್ ಶೆಟ್ಟಿಗಾರ್, ಶ್ರೆಕಾಂತ್ ,ಎನ್‌ಎಂಪಿಎ ಅಧಿಕಾರಿಗಳು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಳಾಯಿ ಕಿರುಜೆಟ್ಟಿ ನಿರ್ಮಾಣ ಕುರಿತಂತೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ವಿಧಾನ ಸಭೆಯಲ್ಲಿ ಗಮನ ಸೆಳೆದಿದ್ದಾರೆ. ಸರ್ವಋತು ಬಂದರು ಮಾಡುವ ಹಾಗೆ ನಾಡದೋಣಿಗೂ ಪ್ರಾಶಸ್ತ್ಯ ಸಿಗುವಂತೆ ಇಲ್ಲಿನ ಬ್ರೇಕ್ ವಾಟರ್ ನಿರ್ಮಾಣವಾಗಬೇಕಿದೆ. ಈಗಿನ ಬ್ರೇಕ್ ವಾಟರ್‌ನಿಂದ ಸುರಕ್ಷಿತ ಮೀನುಗಾರಿಕೆ ಸಾಧ್ಯವಿಲ್ಲ. ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟರ್‌ನ ಉದ್ದವನ್ನು 831 ರಿಂದ ಸರಾಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ)ಸದರಿ ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಪರಿಷ್ಕರಿಸಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ಮೀನುಗಾರರ ಪ್ರತಿನಿಧಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆದು ಒಮ್ಮತದ ನಿರ್ಧಾರಕ್ಕೆ ಬಂದ ಬಳಿಕ ಕಾಮಗಾರಿ ಮುಂದುವರಿಸಲಾಗುವುದು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.