ಮಂಗಳೂರು; ಮಾದಕ ವಸ್ತು ಸೇವನೆ, ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಗ್ರಾಮದ ಮೊಗವೀರಪಟ್ಣ ಬೀಚ್ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವೈಶಾಖ್ ಎಂಬಾತನ್ನು ಮಂಗಳೂರಿನ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಜಪ್ಪಿನಮೊಗರು ಕುಡ್ಪಾಡಿ ರೈಲ್ವೇ ಅಂಡರ್‌ಪಾಸ್ ರಸ್ತೆಯಿಂದ ಸೂಟರ್‌ಪೇಟೆ ಹಾದು ಹೋಗುವ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರವಿಂದ್ (32) ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಂದ ಬಿಳಿ ಬಣ್ಣದ ಹರಳಿನಂತೆ ತೋರುವ 1.45 ಗ್ರಾಂ ಎಂಡಿಎಂಎ, 238 ಗ್ರಾಂ ಗಾಂಜಾ, ಮೊಬೈಲ್, ಬ್ಯಾಟರಿ ಚಾಲಿತ ತೂಕ ಯಂತ್ರ, ಪ್ಲಾಸ್ಟಿಕ್ ಜಿಪ್‌ಲಾಕ್ ಕವರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಶಪಡಿಸಿಕೊಂಡಿರುವ ವಸ್ತುಗಳು ಒಟ್ಟು ಮೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುವನ್ನು ಪೂರೈಕೆ ಮಾಡಿದ್ದ ಆರೋಪಿ ಇಸ್ಮಾಯಿಲ್ ಸೊಹೈಲ್ ಎಂಬಾತನನ್ನು ಬಂಧಿಸಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.