ಜಿಲ್ಲೆ

ಮಂಗಳೂರು ಡಾ.ಅಂಬೇಡ್ಕರ್ ವೃತ್ತಕ್ಕೆ ಕೈಗೂಡದ ಮುಹೂರ್ತ; ಹಂಪನ್ ಕಟ್ಟೆ- ಕಂಕನಾಡಿ ಫ್ಲೈ ಓವರ್ ನಿರ್ಮಾಣಕ್ಕೆ ಎನ್ಐಟಿಕೆ ತಜ್ಞರ ಸಲಹೆ

Mangaluru - Prakash MC Manjeshwar

*ಪ್ರಕಾಶ್ ಮಂಜೇಶ್ವರ, ಮಂಗಳೂರು

ಪ್ರಸಕ್ತ ಇರುವ ಸ್ಥಿತಿಯಲ್ಲಿ ಮಂಗಳೂರು ನಗರದಲ್ಲಿ ಹಳೇ ಜ್ಯೋತಿ ಟಾಕೀಸ್ ಇದ್ದ ಪ್ರದೇಶದ ಸಮೀಪದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ನಿರ್ಮಾಣ ಅಸಾಧ್ಯ.

ಇದು ಮಂಗಳೂರು ಮಹಾನಗರ ಪಾಲಿಕೆಯ ಕೋರಿಕೆಯಂತೆ ಪ್ರಸ್ತಾವಿತ ವೃತ್ತ ಹಾಗೂ ಆಸುಪಾಸಿನ ರಸ್ತೆಗಳ ಸಂಚಾರ ದಟ್ಟಣೆಯನ್ನು ಅಧ್ಯಯನ ನಡೆಸಿದ ಬಳಿಕ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್‌ಐಟಿಕೆ) ಸುರತ್ಕಲ್ ಒದಗಿಸಿರುವ ತಾಂತ್ರಿಕ ವರದಿಯ ತಾತ್ಪರ್ಯ.

ಈ ಪ್ರದೇಶದಲ್ಲಿ ಉದ್ದೇಶಿತ ರೀತಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಹಾಗೂ ವೃತ್ತ ನಿರ್ಮಿಸುವುದಿದ್ದರೆ, ಹಂಪನ್‌ಕಟ್ಟೆ- ಕಂಕನಾಡಿ ರಸ್ತೆಯ ಈ ಭಾಗದಲ್ಲಿ ಫ್ಲೈ ಓವರ್ (ಮೇಲ್ಸೇತುವೆ) ನಿರ್ಮಿಸಬೇಕು. ಇದು ಸಾಧ್ಯವಾದರೆ ನೆಲ ಮಟ್ಟದಲ್ಲಿ ಹಂಪನ್‌ಕಟ್ಟೆಯಿಂದ ಬಂಟ್ಸ್‌ಹಾಸ್ಟೆಲ್ ಕಡೆಗೆ ವಾಹನಗಳು ಸಂಚರಿಸಬಹುದು ಮತ್ತು ಉದ್ದೇಶಿತ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತ ನಿರ್ಮಿಸಬಹುದು ಎಂದು ತಜ್ಞರಾದ ಎನ್‌ಐಟಿಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಮನು, ಸಿವಿಲ್ ಇಂಜಿನಿಯರ್‌ಗಳಾದ ಡಾ.ರವಿರಾಜ್ ಎಚ್.ಎಂ, ಡಾ.ಮಿಥುನ್ ಮೋಹನ್ ಅವರ ತಂಡ ವರದಿ ನೀಡಿದೆ.

ಹಂಪನ್‌ಕಟ್ಟ ರಸ್ತೆ, ಬಂಟ್ಸ್‌ಹಾಸ್ಟೆಲ್ ರಸ್ತೆ, ಕಂಕನಾಡಿ ರಸ್ತೆ, ಅತ್ತಾವರ ಕ್ರಾಸ್ ರಸ್ತೆ ಮತ್ತು ಬಲ್ಮಠ ರಸ್ತೆಗಳಲ್ಲಿರುವ ವಾಹನಗಳ ಓಡಾಟವನ್ನು ನಿರ್ದಿಷ್ಟ ದಿನಗಳ ಕಾಲ ಅಧ್ಯಯನ ನಡೆಸಿ ತಜ್ಞರ ತಂಡ ವರದಿ ಸಿದ್ಧಪಡಿಸಿದೆ.

ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಿ ಅಂಬೇಡ್ಕರ್ ವೃತ್ತ ನಿರ್ಮಾಣ ಸಂಬಂಧಿಸಿ ಅಧಿಕಾರಿ ವರ್ಗ ತೀರ್ಮಾನ ಕೈಗೊಳ್ಳಲಿದೆ ಎಂದು ಪಾಲಿಕೆ ಮೂಲ ತಿಳಿಸಿದೆ.

ನಗರ ನಡುವೆ ಹಾಗೂ ಆಸುಪಾಸು ಸುಮಾರು 25 ವೃತ್ತಗಳಿವೆ. ಇತ್ತೀಚೆಗೆ ನಿರ್ಮಾಣಗೊಂಡ ವೃತ್ತಗಳು ಸಹಿತ ಅನೇಕ ಕಡೆ ಮಹಾತ್ಮರ ಪ್ರತಿಮೆಗಳು ಇವೆ. ಆದರೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಒಂದು ವೃತ್ತ ನಿರ್ಮಿಸಬೇಕು ಎನ್ನುವ ಅಂಬೇಡ್ಕರ್‌ವಾದಿಗಳ ಮೂರು ದಶಕಗಳ ಹೋರಾಟ ಇನ್ನೂ ಫಲ ನೀಡಿಲ್ಲ ಎನ್ನುವ ಕೊರಗು ಸಂಘಟನೆಗಳಿಗೆ ಇವೆ.

ದಲಿತ ಸಂಘಟನೆಗಳ ನಿರಂತರ ಪ್ರಯತ್ನದ ಬಳಿಕ ಕಳೆದ ಸೆಪ್ಟಂಬರ್ 15 ರಂದು (2024) ಅಂಬೇಡ್ಕರ್ ವೃತ್ತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶಂಕುಸ್ಥಾಪನೆ ನೆರವೇರಿಸಲು ದಿನ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ದಲಿತ ಸಂಘಟನೆಯ ಒಂದು ಗುಂಪು ಭಿನ್ನ ನಿಲುವು ತೋರಿದ ಕಾರಣ ಶಂಕುಸ್ಥಾಪನೆ ದಿನ ಮತ್ತೆ ಮುಂದೂಡಲಾಗಿತ್ತು. ಅಂಬೇಡ್ಕರ್ ವೃತ್ತವನ್ನು ವಿವಿಧ ರಸ್ತೆಗಳು ಸಂಧಿಸುವ ಕೇಂದ್ರ ಪ್ರದೇಶದ ಬದಲು ರಸ್ತೆ ಮಗ್ಗುಲಿನ ತ್ರಿಕೋನ ಆಕೃತಿಯ ಜಮೀನಿನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಅಂದು ಒಂದು ಗುಂಪು ವಿರೋಧ ವ್ಯಕ್ತಪಡಿಸಿತ್ತು.

ಮುಂದಿನ 15 ದಿನದೊಳಗೆ ಅಂಬೇಡ್ಕರ್ ವೃತ್ತಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳು ಜೊತೆಗೂಡಿ ವಿವಿಧ ಹಂತಗಳಲ್ಲಿ ಹೋರಾಟ ಸಂಘಟಿಸಲಿವೆ ಎಂದು ಕಳೆದ ವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ಅತ್ಯಧಿಕ ವಾಹನ ದಟ್ಟಣೆ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಪ್ರಸ್ತಾವಿತ ಪ್ರದೇಶದಲ್ಲಿ ್ಲೈಓವರ್ ನಿರ್ಮಾಣ ಪ್ರಾಯೋಗಿಕವಾಗಿ ಸುಲಭ ಸಾಧ್ಯವಿಲ್ಲ. ಆದ್ದರಿಂದ ತಜ್ಞರ ವರದಿ ಪಾಲನೆ ಹಾಗೂ ಮುಂದಿನ ತೀರ್ಮಾನಕ್ಕೆ ದಲಿತ ಸಂಘಟನೆಗಳ ಮನವೊಲಿಸುವ ಸವಾಲು ಅಧಿಕಾರಿ ವರ್ಗ ಹಾಗೂ ಸರ್ಕಾರದ ಪ್ರತಿನಿಧಿಗಳ ಮುಂದಿದೆ.

------

ಉದ್ದೇಶಿತ ಪ್ರದೇಶದಲ್ಲಿ ಇರುವ ಸ್ಥಿತಿಯಲ್ಲಿಯೇ ಡಾ.ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತ ನಿರ್ಮಾಣ ಅಸಾಧ್ಯ ಎಂದು ತಾಂತ್ರಿಕ ವರದಿ ಬಂದಿದೆ. ದಲಿತ ಸಂಘಟನೆ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

* ರವಿಚಂದ್ರ ನಾಯಕ್

ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

------

ಅಭಿವೃದ್ಧಿಯ ವಿಷಯದಲ್ಲಿ ನಮ್ಮ ಸಹಕಾರ ಖಂಡಿತಾ ಇರುತ್ತದೆ. ಸುತ್ತಲಿನ ರಸ್ತೆಗಳು ಸಂಧಿಸುವ ಉದ್ದೇಶಿತ ಪ್ರದೇಶದಲ್ಲಿಯೇ ಸಣ್ಣ ಗಾತ್ರದ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವುದು ಮತ್ತು ಅಲ್ಲಿಯೇ ಈ ಹಿಂದೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಕಾದಿರಿಸಿದ ತ್ರಿಕೋನ ಆಕೃತಿಯ ಪ್ರದೇಶದಲ್ಲಿ ಬುದ್ದನ ಸ್ತೂಪ ಹಾಗೂ ಸಂವಿಧಾನದ ಪೀಠಿಕೆಯನ್ನು ನಿರ್ಮಿಸುವ ಕುರಿತು ದಲಿತ ಸಂಘಟನೆಗಳಲ್ಲಿ ಸಹಮತವಿದೆ.

* ಅಶೋಕ್ ಕೊಂಚಾಡಿ,

ದಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ