ಮಂಗಳೂರು: ಬಾಯಿ ಎನ್ನುವುದು ನಮ್ಮ ದೇಹದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕೇಂದ್ರವಾಗಿರುತ್ತದೆ. ಹಲ್ಲು ನೋವಿನ ಹೊರತಾದ ಹತ್ತಾರು ರೋಗಗಳು ಪ್ರಕಟಗೊಳ್ಳುತ್ತದೆ ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕ ಹಾಗೂ ದಂತ ವೈದ್ಯ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ತಲಪಾಡಿ ಸಮೀಪದ ನಾರ್ಲಪಡೀಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಮಂಗಳವಾರ ನಡೆದ ದಂತ ಆರೋಗ್ಯ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತಹೀನತೆ, ವಿಟಮಿನ್ ಕೊರತೆ, ಲಿವರ್ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹಿಡಿದು ರಕ್ತದ ಕ್ಯಾನ್ಸರ್ ವರೆಗಿನ ಎಲ್ಲ ಮಾಹಿತಿಗಳು ಆರಂಭಿಕ ಹಂತದಲ್ಲಿಯೇ ಬಾಯಿಯಲ್ಲಿ ಕಂಡು ಬರುತ್ತದೆ. ದಂತ ವೈದ್ಯರು ಇದನ್ನು ಗುರುತಿಸಿ ತಿಳಿ ಹೇಳಿ ರೋಗಿಯನ್ನು ಜಾಗೃತಿಗೊಳಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ಶಿಕ್ಷಕಿಯರಾದ ಇಂದಿರಾ, ಜಾನೆಟ್ ಡಿಮೆಲ್ಲೋ, ರೇಖಾ ಉಪಸ್ಥಿತರಿದ್ದರು. 35 ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಮತ್ತು ಟೂತ್ ಬ್ರಷ್ ವಿತರಿಸಲಾಯಿತು.