ಜಿಲ್ಲೆ

ಟೆಲಿಗ್ರಾಂ ಪೇಜ್‌ನಲ್ಲಿ ಟಾಸ್ಕ್ 16.42 ಲಕ್ಷ ರೂ. ವಂಚನೆ

ಮಂಗಳೂರು: ಟೆಲಿಗ್ರಾಂ ಪೇಜ್‌ನಲ್ಲ ಟಾಸ್ಕ್ ನೀಡಿ 16.42 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಮಾ.1ರಂದು ಫೆಸ್‌ಬುಕ್ ಪೇಜ್ ನೋಡುವಾಗ ‘ವರ್ಕ್ ಫ್ರಂ ಹೋಂ’ ಜಾಹೀರಾತು ಕಂಡು ಅದನ್ನು ಕ್ಲಿಕ್ ಮಾಡಿದ್ದರು. ಆಗ ಹೊಸ ಟೆಲಿಗ್ರಾಮ್ ಪೇಜ್ ತೆರೆದುಕೊಂಡಿತ್ತು. ಆ ಟೆಲಿಗ್ರಾಂ ಗ್ರೂಪ್‌ನಲ್ಲಿ ಕೆಲವು ಟಾಸ್ಕ್ ಮಾಡುವಂತೆ ತಿಳಿಸಲಾಯಿತು. ಗ್ರೂಪ್‌ಗೆ ಸೇರ್ಪಡೆಯಾಗಿರುವುದಕ್ಕಾಗಿ ಅವರ ಖಾತೆಗೆ 120 ರೂ.ಗಳನ್ನು ಹಾಗೂ ಅನಂತರ 20 ಟಾಸ್ಕ್ ನಿರ್ವಹಿಸಿರುವುದಕ್ಕೆ 200 ರೂ.ಗಳನ್ನು ವರ್ಗಾಯಿಸಲಾಯಿತು. ಬಳಿಕ 800 ರೂ. ಪಾವತಿ ಮಾಡುವಂತೆ ಹಾಗೂ ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅದಕ್ಕೆ ಪ್ರತಿಯಾಗಿ ಅವರ ಖಾತೆಗೆ 1040 ರೂ.ಗಳನ್ನು ಪಾವತಿ ಮಾಡಲಾಯಿತು. ಮಾ.4ರಂದು ದೂರುದಾರರು 40,000 ರೂ.ಗಳನ್ನು ಅಪರಿಚಿತರು ನೀಡಿದ ಖಾತೆಗೆ ಪಾವತಿ ಮಾಡಿದ್ದರು.

ಅನಂತರವೂ ಅಧಿಕ ಲಾಭದ ಆಮಿಷಕ್ಕೆ ಒಳಗಾಗಿ ಮಾ.13ರವರೆಗೆ ಅಪರಿಚಿತರು ನೀಡಿದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 16.42 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಮಾ.18ರಂದು ಆ ಹಣವನ್ನು ವಾಪಸ್ ಕೇಳಿದಾಗ ನೀಡಲಿಲ್ಲ. ಆಗ ತಾನು ಮೋಸ ಹೋಗಿರುವುದು ದೂರುದಾರರಿಗೆ ಗೊತ್ತಾಗಿದೆ. ಈ ಬಗ್ಗೆ 1930 ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.