ಮಂಗಳೂರು: ರಕ್ತದಾನದ ಕುರಿತು ಮೂಡಿಸಲು ಪ್ರೊಫೆಸರ್ ಸೈಫ್ ಸುಲ್ತಾನ್ ಮತ್ತು ಅದೀಲಾ ಫರ್ಹೀನ್ ದಂಪತಿ ಕುಡ್ಲ (ಮಂಗಳೂರು) ದಿಂದ ಕಾರ್ಗಿಲ್‌ಗೆ 4,000 ಕಿ.ಮೀ. ಬೈಕ್ ರೈಡ್ (ಒನ್ ವೇ) ಗೆ ಮುಂದಾಗಿದ್ದಾರೆ. ನಗರದ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಆವರಣದಲ್ಲಿ ಜುಲೈ 28ರಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು ದಂಪತಿಯ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಮತ್ತು ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನ ಬೆಂಬಲದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಸೈಫ್ ಮತ್ತು ಅದೀಲಾ ಒಂದು ತಿಂಗಳಿನಿಂದ ಈ ರೈಡ್‌ಗೆ ತಯಾರಿ ನಡೆಸಿದ್ದು, ರಕ್ತದಾನದ ಕುರಿತು ಜಾಗೃತಿ ಜೊತೆಗೆ ಭಾರತ ಸುರಕ್ಷಿತವಾಗಿದೆ ಮತ್ತು ಹಿಜಾಬ್ ಧರಿಸಿದ ಮಹಿಳೆ ಬಗ್ಗೆ ಕುರಿತು ಇರುವ ತಪ್ಪು ಕಲ್ಪನೆಯನ್ನು ನಿವಾರಿಸುವ ಉದ್ದೇಶ ಕೂಡ ಈ ಯಾತ್ರೆಯ ಹಿಂದಿದೆ.
ಆಗಸ್ಟ್ 15 ರಂದು ಕಾರ್ಗಿಲ್ ಪರ್ವತಶ್ರೇಣಿಯ ಯುದ್ಧಭೂಮಿಯಾಗಿದ್ದ ಪ್ರದೇಶವನ್ನು ತಲುಪಲಿರುವ ದಂಪತಿ ಜೊತೆಗೆ ಒಯ್ಯಲಿರುವ ರಾಷ್ಟ್ರಧ್ವಜವನ್ನು ಮಿಲಿಟರಿಯ ಹಿರಿಯ ಅಧಿಕಾರಿ ಕರ್ನಲ್ ಅಭಿಮನ್ಯು ಹಾರಿಸಲಿದ್ದಾರೆ. ಕಾರ್ಗಿಲ್‌ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಸೈಫ್ 20 ನೇ ಬಾರಿಗೆ ಮತ್ತು ಅವರ ಪತ್ನಿ ಮೊದಲ ಬಾರಿಗೆ ರಕ್ತದಾನ ವಾಡಲಿದ್ದಾರೆ.
ದಂಪತಿ ಹೊನ್ನಾವರ, ಬೆಳಗಾವಿ, ಪುಣೆ, ಮುಂಬೈ, ಸೂರತ್, ಅಹಮದಾಬಾದ್, ಉದಯಪುರ, ಜೈಪುರ, ನವದೆಹಲಿ, ಅಮತಸರ, ಜಮ್ಮು ಮತ್ತು ಶ್ರೀನಗರ ಮೂಲಕ ಕಾರ್ಗಿಲ್ ತಲುಪಲಿದ್ದಾರೆ. ಅವರು ದಿನಕ್ಕೆ ಸರಿಸುವಾರು 300 ಕಿಮೀ ಸವಾರಿ ವಾಡುವ ಭರವಸೆ ಹೊಂದಿದ್ದಾರೆ.
ಆರಂಭದಲ್ಲಿ ತಾನೋರ್ವನೇ ಕಾರ್ಗಿಲ್ ಬೈಕ್ ಸವಾರಿ ನಡೆಸಲು ಯೋಜನೆ ರೂಪಿಸಿದ್ದೆ. ಆದರೆ ಪತ್ನಿ ಅದೀಲಾ ಕೂಡ ಯಾತ್ರೆಯ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದಾಗ ಯಾಕಾಗಬಾರದು ಎಂದು ಯೋಜನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಂಡಿರುವುದಾಗಿ ಸ್ೈ ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯಾತ್ರೆಯ ಬಗ್ಗೆ ತಿಳಿಸಿದರು.
ನಾವು ಬಿಯಂಡಬ್ಲೂೃ ಜಿಯಸ್ 310 ಬೈಕ್‌ನಲ್ಲಿ ಸವಾರಿ ವಾಡಲಿದ್ದೇವೆ ಮತ್ತು ಪ್ರಸ್ತುತ ಬೈಕನ್ನು ನಮ್ಮ ಪ್ರಯಾಣದ ಅಗತ್ಯಗಳಿಗೆ ಸರಿಹೊಂದುವಂತೆ ಸ್ವಲ್ಪ ವಾರ್ಪಡಿಸಲಾಗಿದೆ. ಪ್ರಯಾಣದ ನಡುವೆ ವಿವಿಧ ಪ್ರಧೇಶಗಳಲ್ಲಿ ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತೇವೆ. ಪ್ರತಿ ಮೂರನೇ ದಿನದಂದು ನಾವು ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿ ಯಲ್ಲಿ ಸೈಫ್ ಅವರ ಪತ್ನಿ ಅದೀಲ ಫರ್ಹೀನ್, ಬೈಕ್ ಮೆಕ್ಯಾನಿಕ್ ಜಾವದ್ ಉಪಸ್ಥಿತರಿದ್ದರು.