ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಆಯ್ಕೆ ಖಚಿತವಾಗಿದೆ. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ರಾತ್ರಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕ ವೇದವ್ಯಾಸ ಕಾಮತ್ ಮತ್ತು ಡಾ.ವೈ.ಭರತ್ ಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಫೆ.28ರಂದು ಬೆಳಗ್ಗೆ 11ಕ್ಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ.
ಉಪ ಮೇಯರ್ ಸ್ಥಾನಕ್ಕೆ ಕುಳಾಯಿ ವಾರ್ಡ್‌ನ ವೇದಾವತಿ ಹೆಸರು ಅಂತಿಮವಾಗಿದೆ ಎಂಬ ಮಾಹಿತಿ ಇದೆ. ಬಿಜೆಪಿ ಅಧಿಕೃತವಾಗಿ ಮೇಯರ್/ ಉಪಮೇಯರ್ ಅಭ್ಯರ್ಥಿ ಹೆಸರು ಇನ್ನೂ ಪ್ರಕಟಿಸಿಲ್ಲ. ಚುನಾವಣೆ ನಡೆಯುವ ಮೇ 28ರಂದು ಬೆಳಗ್ಗೆ 8ಕ್ಕೆ ಎಲ್ಲ ಬಿಜೆಪಿ ಕಾರ್ಪೊರೇಟರ್‌ಗಳನ್ನು ಪಕ್ಷದ ಜಿಲ್ಲಾ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.
60 ಸದಸ್ಯ ಬಲದ ಮನಪಾ ಚುನಾವಣೆಯಲ್ಲಿ 44 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಬಹುಮತ ಹೊಂದಿದೆ. ಮೇಯರ್- ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ -ಸಾಮಾನ್ಯ ಮಹಿಳೆ ಮೀಸಲು ಹೊಂದಿದೆ. ಬಿಜೆಪಿ ಹಿರಿಯ ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ಶರತ್ ಕುಮಾರ್ ಹೆಸರು ಸ್ಥಾನಕ್ಕೆ ಪ್ರಸ್ತಾವನೆಯಲ್ಲಿತ್ತು. ದಿವಾಕರ ಅವರು ಕಂಟೋನ್ಮೆಂಟ್ ವಾರ್ಡ್‌ನಿಂದ ಮೂರನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷ ಹಿರಿತನಕ್ಕೆ ಮನ್ನಣೆ ನೀಡಿದೆ. ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಿಂದ ಮೇಯರ್ ಆಯ್ಕೆ ನಡೆದ ಕಾರಣ ಉಪ ಮೇಯರ್ ಸ್ಥಾನ ಮಂಗಳೂರು ನಗರ ಉತ್ತರ ಕ್ಷೇತ್ರದ ಕಾರ್ಪೊರೇಟರ್‌ಗೆ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸ್ಪರ್ಧೆ
ಕಾಂಗ್ರೆಸ್ ಪಕ್ಷ ಕೂಡ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದೆ. ಮೇಯರ್ ಸ್ಥಾನಕ್ಕೆ ಮರೋಳಿ ವಾರ್ಡ್‌ನ ಕೇಶವ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ ಕೇವಲ ಇಬ್ಬರು ಮಹಿಳಾ ಸದಸ್ಯರಿದ್ದಾರೆ. ಈ ಪೈಕಿ ಜೆಸಿಂತಾ ವಿಜಯ ಆಲ್ಫ್ರೆಡ್ ಈ ಹಿಂದೆ ಮೇಯರ್ ಆಗಿದ್ದವರು. ಹಾಗಾಗಿ ಉಪ ಮೇಯರ್ ಸ್ಥಾನಕ್ಕೆ ಬಂದರ್ ವಾರ್ಡ್‌ನ ಜೀನತ್ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
32ನೇ ಮೇಯರ್
ಫೆ.28ರಂದು ಮಂಗಳೂರು ಮಹಾನಗರ ಪಾಲಿಕೆಗೆ 32ನೇ ಮೇಯರ್ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್‌ನ 27 ಹಾಗೂ ಬಿಜೆಪಿಯ 4 ಮಂದಿಗೆ ಇದುವರೆಗೆ ಮೇಯರ್ ಸ್ಥಾನ ಒಲಿದಿದೆ. ಈ ಪೈಕಿ ಕಾಂಗ್ರೆಸ್‌ನ ಎಂ.ಸದಾಶಿವ ಭಂಡಾರಿ ಮತ್ತು ರಮೇಶ್ ಕೋಟ್ಯಾನ್ ತಲಾ 2 ಬಾರಿ ಮೇಯರ್ ಆಗಿದ್ದರು. ಇದನ್ನು ಪ್ರತ್ಯೇಕ ಅವಧಿಯಾಗಿ ಪರಿಗಣಿಸಿದರೆ ದಿವಾಕರ್ 34ನೇ ಆಗಲಿದ್ದಾರೆ.