ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಾಗಿ ಬ್ಯಾಂಕ್‌ಗಳು, ಕೋ-ಅಪರೇಟಿವ್ ಸೊಸೈಟಿ ಬ್ಯಾಂಕ್‌ಗಳು ಹಾಗೂ ಇತರ ಬ್ಯಾಂಕ್‌ಗಳು ಸೂಕ್ತ ಭದ್ರತೆ ಹಾಗೂ ಸುರಕ್ಷತೆ ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರತಿನಿಧಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ನಗರ ಪೊಲೀಸ್ ವತಿಯಿಂದ ಫೆ.3ರಿಂದ 5ರ ತನಕ ಬ್ಯಾಂಕ್, ಎ.ಟಿ.ಎಂ., ಸೊಸೈಟಿ, ಆಭರಣ ಮಳಿಗೆ, ಫೈನಾನ್ಸ್ ಸಂಸ್ಥೆಗಳ ಭದ್ರತೆಯ ಕುರಿತು ಜಾಗೃತಿ ಮೂಡಿಸುವ ಸಭೆ ನಡೆಯಿತು. ವಿವಿಧ ಹಣಕಾಸು ವಹಿವಾಟು ನಡೆಸುವ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರಿಗೆ ಸಲಹೆ, ಸೂಚನೆ ನೀಡಲಾಯಿತು. ಒಟ್ಟು 723 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ, ಹಾಗೂ ಸಿಬ್ಬಂದಿಯವರಿಗೆ ಬ್ಯಾಂಕ್ ಸುರಕ್ಷತೆಯ ಬಗ್ಗೆ ತರಬೇತಿ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ದರೋಡೆ, ಕಳ್ಳತನ ಅಪರಾಧವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮತ್ತು ಸೂಕ್ತ ಸೂಚನೆ ನೀಡಲಾಗಿದೆ. ಆರ್.ಬಿ.ಐ ರವರ ಮಾರ್ಗಸೂಚಿಯಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆಯನ್ನು ನೀಡಲಾಗಿದೆ. ಅಪಾಯ ಮತ್ತು ತುರ್ತು ಸಂಧರ್ಭದಲ್ಲ್ಲಿ ಸಹಾಯವಾಣಿ 112 ಕ್ಕೆ ಕರೆ ಮಾಡುವಂತೆಯು, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ, ಹೊಯ್ಸಳ ಪೊಲೀಸರು ಕೃತ್ಯ ನಡೆದ ಸ್ಥಳಗಳಿಗೆ ತಲುಪಿ ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆಂದು ಮಾಹಿತಿ ನೀಡಲಾಯಿತು.
ಕೆಲವು ಸಂಸ್ಥೆಗಳು ಸೂಕ್ತ ಸುರಕ್ಷತೆ ಹಾಗೂ ಭದ್ರತೆಗಾಗಿ ಅತ್ಯಾಧುನಿಕ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅವರುಗಳನ್ನು ಪ್ರಶಂಶಿಸಿ ಇತರೆ ಸಂಸ್ಥೆಗಳಲ್ಲಿಯೂ ಸಹ ಅದೇ ರೀತಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಎಲ್ಲಾ ಠಾಣಾಧಿಕಾರಿಗಳು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಭದ್ರತೆಯ ಬಗ್ಗೆ ಚರ್ಚಿಸಿ ಪರಿಶೀಲಿಸಿ ಸುರಕ್ಷತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ನೀಡಿದರು.
ಅಲ್ಲದೇ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸೂಚಿಸಿದ್ದು, ತಮ್ಮ ಗ್ರಾಹಕರು ಅಪರಿಚಿತರಿಂದ ಸೈಬರ್ ವಂಚನೆಗೊಳಗಾಗಿದ್ದಲ್ಲಿ ಕೂಡಲೇ ಸೈಬರ್ ಕ್ರೈಮ್ ಸಹಾಯವಾಣಿ 1930 ನೇ ನಂಬ್ರಕ್ಕೆ ಕರೆಮಾಡಲು ತಿಳುವಳಿಕೆ ನೀಡುವಂತೆ ಕೋರಲಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸಹ ಸೂಚನೆ ನೀಡಿ ಗ್ರಾಹಕರಿಗೆ ಸಾಲ ವಸೂಲಿ ನೆಪದಲ್ಲಿ ಯಾವುದೇ ಮಾನಸಿಕ ಕಿರುಕುಳ ಮತ್ತು ತೊಂದರೆ ಕೊಡದಂತೆ ತಾಕೀತು ಮಾಡಲಾಗಿದೆ, ಎಲ್ಲಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕೆಂದು ತಿಳುವಳಿಕೆ ನೀಡಲಾಗಿದೆ .ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.