ಜಿಲ್ಲೆ

ಒಳಚರಂಡಿಗೆ ಮಳೆ ನೀರು ಜೋಡಣೆ ಪಾಲಿಕೆ ಮೌನ

ಹರೀಶ ಎಂ.

ಮಂಗಳೂರು: ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇದ್ದರೂ ಮಂಗಳೂರಿನ ನೂರಾರು ಮನೆ/ವಸತಿ ಸಮುಚ್ಛಯದವರು ಶೌಚಾಲಯದ ನೀರು ಹರಿಯುವ ಒಳಚರಂಡಿಗೆ ಮಳೆ ನೀರನ್ನು ಜೋಡಣೆ ಮಾಡಿರುವುದರಿಂದ ನಗರದ ವಿವಿಧ ಕಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಗಲೀಜು ನೀರು ಹರಿಯುವಂತಾಗಿದೆ.


ನಗರದ ಒಳಚರಂಡಿ ಜೋಡಣೆಗೆ ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತ ಮುತ್ತ ಬೀಳುವ ಮಳೆಯ ನೀರನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧ ಮ್ಯಾನ್‌ಹೋಲ್‌ಗಳು ತೆರೆದು ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಮಂಗಳೂರು ಪಾಲಿಕೆ ಮಾತ್ರ ಮೌನ ವಹಿಸಿದ ಪರಿಣಾಮ ಅಲ್ಲಲ್ಲಿ ಮ್ಯಾನ್‌ಹೋಲ್‌ಗಳು ನಿರಂತರ ಉಕ್ಕಿ ಹರಿಯುತ್ತಿದೆ.


ಮನೆ/ಪ್ಲಾೃಟ್ ಬಳಿಯಲ್ಲಿ ಮಳೆ ನೀರು ನಿಲ್ಲಬಾರದು ಎಂಬ ಕಾರಣದಿಂದ ಕೆಲವು ಮನೆ, ್ಲ್ಯಾಟ್‌ನವರು ತಮಗೆ ಸಂಪರ್ಕದ ಒಳಚರಂಡಿ ಲೈನ್‌ನಲ್ಲಿ ಮಳೆ ನೀರನ್ನು ಲಿಂಕ್ ಮಾಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ ಎಂಬ ನೆಪವಿಟ್ಟುಕೊಂಡು ಮಳೆ ನೀರನ್ನು ಒಳಚರಂಡಿಗೆ ಲಿಂಕ್ ಮಾಡಿದ್ದಾರೆ.


ರಸ್ತೆ ಮಧ್ಯೆ ಮ್ಯಾನ್‌ಹೋಲ್ ಗಲೀಜು
ಮಳೆಯ ನೀರನ್ನು ಒಳಚರಂಡಿ ಕೊಳವೆಯಲ್ಲಿ ಹರಿಸಿದ ಕಾರಣದಿಂದಾಗಿ ನಗರದ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯ ನೀರು ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿದು ರಸ್ತೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೆ ಒಳಚರಂಡಿ ಸಂಸ್ಕರಣ ಘಟಕಗಳಿಗೂ ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಬಂದು ಸಂಸ್ಕರಣಾ ಘಟಕಗಳಲ್ಲಿ ತೊಂದರೆ ಉಂಟಾಗುತ್ತಿದೆ.


ಮ್ಯಾನ್‌ಹೋಲ್ ಆವಾಂತರ
ಕುದ್ರೋಳಿ, ಪಾಂಡೇಶ್ವರ, ಪಡೀಲ್, ಎಕ್ಕೂರು, ಕೊಟ್ಟಾರಚೌಕಿ ಸೇರಿದಂತೆ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಈ ಲೆಕ್ಕಾಚಾರದಷ್ಟೇ ಒಳಚರಂಡಿ ನೀರು ಎಸ್‌ಟಿಪಿಗೆ ಬರಬೇಕು. ಆದರೆ, ಒಳಚರಂಡಿಗೆ ಮಳೆ ನೀರನ್ನು ಲಿಂಕ್ ಮಾಡಿದರೆ ನೀರಿನ ಪ್ರಮಾಣ ದುಪ್ಪಟ್ಟಾಗುತ್ತದೆ. ಜತೆಗೆ ನಿಯಮಿತ ಸಾಮರ್ಥ್ಯಕ್ಕಿಂತ ಅಧಿಕ ನೀರು ಎಸ್‌ಟಿಪಿಗೆ ಬಂದರೆ ಅದು ಸ್ವೀಕರಿಸಲೂ ಆಗುವುದಿಲ್ಲ. ಪೈಪ್‌ಲೈನ್ ಕೂಡ ಅದಕ್ಕೆ ತಕ್ಕ ಪ್ರಮಾಣದಲ್ಲಿಲ್ಲ. ಹೀಗಾಗಿ ಬಂದ ನೀರು ವಾಪಾಸ್ ಆಗುತ್ತದೆ. ಈ ವೇಳೆ ಒತ್ತಡ ತಾಳದೆ ಮಧ್ಯದ ಮ್ಯಾನ್‌ಹೋಲ್‌ಗಳಿಂದ ಒಳಚರಂಡಿ ನೀರು ಹೊರಗೆ ಬರುವಂತಾಗುತ್ತದೆ.