ಜಿಲ್ಲೆ

ಸ್ಟೇಟ್‌ಬ್ಯಾಂಕ್ ಬೀದಿ ಬದಿ ವ್ಯಾಪಾರಿಗಳ ಪ್ರತಿರೋಧ ಮುಂದುವರಿದ ಟೈಗರ್ ಕಾರ್ಯಾಚರಣೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧ ಟೈಗರ್ ಕಾರ್ಯಾಚರಣೆ ನಾಲ್ಕನೇ ದಿನವೂ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಮುಂದುವರಿದಿದೆ.


ಗುರುವಾರ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ವತಿಯಿಂದ ನೀಡಿದ ಗುರುತಿನ ಚೀಟಿ ಹಿಡಿದು ನೂರಕ್ಕಿಂತಲೂ ಅಧಿಕ ವ್ಯಾಪಾರಿಗಳು ಟೈಗರ್ ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಪಾಲಿಕೆಯೇ ಅವಕಾಶ ಕಲ್ಪಿಸಿ, ಇದೀಗ ಏಕಾಏಕಿ ಅಂಗಡಿಗಳನ್ನು ತೆರವು ಮಾಡುವುದು ಅಕ್ಷಮ್ಯ ಅಪರಾಧ. ಮಳೆಗಾಲದಲ್ಲಿ ಬಡ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು? ಅವರ ಕುಟುಂಬವನ್ನು ಹೇಗೆ ಸಲಹಬೇಕು? ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಬಾರದು ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿರೋಧವೊಡ್ಡಿದರು.


ಈ ಸಂದರ್ಭ ಪಾಲಿಕೆ ವಲಯ ಅಯುಕ್ತೆ ರೇಖಾ ಶೆಟ್ಟಿ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಬೀದಿ ಬದಿ ವ್ಯಾಪಾರಸ್ಥರು ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ. ವಾಹನ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಟೈಗರ್ ಕಾರ್ಯಾಚರಣೆ ಅನಿವಾರ್ಯ. ನಗರದ ಎಲ್ಲಾ ಕಡೆಗಳಲ್ಲೂ ಟೈಗರ್ ಕಾರ್ಯಾಚರಣೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ ಎಂದು ರೇಖಾ ಶೆಟ್ಟಿ ವಾದಿಸಿದರು. ಅಂತಿಮವಾಗಿ ಪೊಲೀಸ್ ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ಟೈಗರ್ ಕಾರ್ಯಾಚರಣೆ ಮುಂದುವರಿಯಿತು.


ಹಣ್ಣು, ತರಕಾರಿ, ಬಟ್ಟೆ ಮೊದಲಾದ ಸುಮಾರು 25ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಪ್ರತಿಭಟನಾಕಾರರು ಪಾಲಿಕೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಮೇಯರ್, ಪಾಲಿಕೆ ಆಯುಕ್ತರ ನಡೆಯನ್ನು ಖಂಡಿಸಿದರು. ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು. ಟೈಗರ್ ಕಾರ್ಯಾಚರಣೆ ವೇಳೆ ಬಂದರು ಪೊಲೀಸ್ ಇನ್‌ಸ್ಪೆಕ್ಟರ್ ಅಜ್ಮತ್ ಆಲಿ ನೇತೃತ್ವದಲ್ಲಿ ರಕ್ಷಣೆ ನೀಡಿದ್ದರು.