ಜಿಲ್ಲೆ

ಆಸ್ತಿ ತೆರಿಗೆ ಇಳಿಕೆ ಪರಿಷ್ಕರಣೆಗೆ ಪ್ರತ್ಯೇಕ ಸಭೆ ಮನಪಾ ಸಾಮಾನ್ಯ ಸಭೆಯಲ್ಲಿ ಮೇಯರ್ ಮಾಹಿತಿ


ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಸಾರ್ವಜನಿಕರಿಗೆ ಹೊರೆಯಾಗದಂತೆ ಇಳಿಕೆ ಮಾಡಿ ಪರಿಷ್ಕರಣೆ ಮಾಡಲು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.


ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಗುರುವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರು.


ಜೂನ್ ತಿಂಗಳ ಮನಪಾ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ಇಳಿಕೆ ಮಾಡಿ ಪರಿಷ್ಕರಣೆ ಮಾಡುವ ಕುರಿತಂತೆ ಪ್ರತಿಪಕ್ಷ ಸದಸ್ಯರ ಆಗ್ರಹದ ಮೇರೆಗೆ ಶಾಸಕರು ನೀಡಿರುವ ಸಲಹೆಯಂತೆ ಹಾಲಿ ಮಾರ್ಗಸೂಚಿ ದರಗಳ ಬಗ್ಗೆ ಚರ್ಚಿಸಲು ಕಾರ್ಯಸೂಚಿಯನ್ನು ಮಂಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.


ಟಿಡಿಆರ್ ಅನುಮೋದನೆಗೆ ಪ್ರತಿಪಕ್ಷ ಆಕ್ಷೇಪ
ಮಂಗಳೂರು ಮಹಾನಗರ ಪಾಲಿಕೆಯ ಜೂನ್ ತಿಂಗಳ ಸಾಮಾನ್ಯ ಸಭೆಯಲ್ಲಿ ಮುಂದೂಡಲ್ಪಟ್ಟ ಟಿಡಿಆರ್ ಪ್ರಕರಣವೊಂದಕ್ಕೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಅನುಮೋದನೆ ನೀಡಿದ್ದು, ಇದಕ್ಕೆ ಪ್ರತಿಪಕ್ಷ ಸದಸ್ಯ ಅಬ್ದುಲ್ ರವೂಫ್ ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದರು.
ವಸತಿ ಯೋಜನೆಗಾಗಿ ಪದವು ಗ್ರಾಮದಲ್ಲಿ ಸುಮಾರು 3.42 ಎಕರೆ ಜಮೀನು ಹಾಗೂ ಮರಕಡದಲ್ಲಿ 9.15 ಎಕರೆ ಭೂಮಿಯನ್ನು ಟಿಡಿಆರ್ ಮೂಲಕ ಸ್ವಾಧೀನ ಪಡಿಸಲು ಜೂನ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಮೇಯರ್ ಪೂರ್ವಭಾವಿ ಮಂಜೂರಾತಿ ನೀಡಿ ಕಾರ್ಯಸೂಚಿ ಮಂಡನೆಯಾಗಿತ್ತು. ಕಳೆದ ಸಭೆಯಲ್ಲಿ ಕಾರ್ಯಸೂಚಿಯ ಬಗ್ಗೆ ಪ್ರಸ್ತಾವಿಸುವ ವೇಳೆಯಲ್ಲಿಯೇ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ವಿಷಯವನ್ನು ಮುಂದೂಡುವುದಾಗಿ ತಿಳಿಸಿದ್ದರು. ಆದರೆ ಗುರುವಾರ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಯನ್ನು ಸ್ಥಿರೀಕರಿಸುವ ಸಂದರ್ಭ ಸುಧೀರ್ ಶೆಟ್ಟಿ ಅವರು ಮರಕಡದ ಟಿಡಿಆರ್ ಭೂಸ್ವಾಧೀನ ಪ್ರಕರಣಕ್ಕೆ ಅನುಮೋದನೆ ನೀಡುವುದಾಗಿ ತಿಳಿಸಿದರು.


ಮರಕಡದ ಈ ಜಾಗವನ್ನು ಟಿಡಿಆರ್ ನೀಡಿ ಸ್ವಾಧೀನ ಪಡಿಸಿಕೊಳ್ಳಲು ಈ ಹಿಂದೆಯೂ ಕಾರ್ಯಸೂಚಿ ಬಂದಿತ್ತು. ಆದರೆ ಜಾಗ ಸರಿ ಇಲ್ಲ ಎಂದು ಕೈಬಿಡಲಾಗಿತ್ತು. ಈಗ ಇದು ಬಡವರಿಗೆ ಮನೆ ಕಟ್ಟಲು ಎಂದು ಸ್ವಾಧೀನ ಪಡಿಸಲಾಗುತ್ತಿದೆ. ಆದರೆ ಇಳಿಜಾರು ಪ್ರದೇಶವಾದ ಇಲ್ಲಿ ಮನೆಕಟ್ಟಲು ಸಾಧ್ಯವಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ವರದಿ ನೀಡಿರುವಾಗ ಯಾರ ಲಾಭಕ್ಕಾಗಿ ಅನುಮೋದನೆ ನೀಡಲಾಗುತ್ತಿದೆ ಎಂದು ಅಬ್ದುಲ್ ರವೂಫ್ ಪ್ರಶ್ನಿಸಿದರು.


ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ಕೆಲ ಸಮಯದಿಂದ ಹಿಂದೆ ನಗರಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, 4500 ಬಡವರಿಗೆ ಮನೆಕಟ್ಟಲು ಅರ್ಜಿ ಬಂದಿದೆ. ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್ ಮೂಲಕ ಜಾಗ ನೀಡುವುದಿದ್ದರೆ ಪತ್ರಿಕಾ ಪ್ರಕಟನೆಯ ಮೂಲಕ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಜಾಗದ ಮಾಲೀಕರು ನೀಡಿರುವ ಪ್ರಸ್ತಾವನೆಯ ಮೇರೆಗೆ ಮರಕಡದ ಭೂಮಿಯನ್ನು ಟಿಡಿಆರ್ ಮೂಲಕ ಸ್ವಾಧೀನ ಪಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಈ ಜಾಗ ಐಟಿ ಪಾರ್ಕ್‌ಗೆ ಕೇಳಲಾಗಿತ್ತು. ಆದರೆ ಸಾರ್ವಜನಿಕ ಉದ್ದೇಶವಲ್ಲದೆ ಇತರ ಕಾರ್ಯಕ್ಕೆ ಟಿಡಿಆರ್ ಮೂಲಕ ಜಾಗ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲದೆ, ಕೈಬಿಡಲಾಗಿತ್ತು. ಈಗ ಬಡವರಿಗೆ ಮನೆ ಅಥವಾ ನಿವೇಶನಕ್ಕಾಗಿ ಈ ಜಾಗ ಬಳಕೆಯಾಗಲಿದೆ ಎಂದು ವಿವರಿಸಿದರು.


ಆ ಜಾಗಕ್ಕೆ ಟಿಡಿಆರ್ ನೀಡುವುದರಿಂದ ಪಾಲಿಕೆಗೆ 50 ಕೋಟಿ ರೂ. ನಷ್ಟವಾಗಲಿದೆ. ಪಾಲಿಕೆಯ ಸದಸ್ಯರು ಇದರ ಬಗ್ಗೆ ಧ್ವನಿ ಎತ್ತದೆ ಮೂಕ ಪ್ರೇಕ್ಷಕರಾಗುವುದು ಬೇಸರದ ಸಂಗತಿ ಎಂದು ಅಬ್ದುಲ್ ರವೂಫ್ ಆಕ್ಷೇಪ ವ್ಯಕ್ತಪಡಿಸಿದರು.


ಪೂರ್ಣಗೊಳ್ಳದ ಯೋಜನೆಗಳು
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಮಾರ್ಟ್ ಸಿಟಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಐದು ವರ್ಷಗಳಾದರೂ ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಆಗಿಲ್ಲ. ಬದಲಾಗಿ ಅದು ಡೆಂೆ ತಾಣವಾಗಿ ಮಾರ್ಪಟ್ಟಿದೆ. ಉರ್ವಾ ಹಾಗೂ ಕಂಕನಾಡಿ ಮಾರುಕಟ್ಟೆ ಕಾಮಗಾರಿ ಆಗಿಲ್ಲ. ಸ್ಟೇಟ್‌ಬ್ಯಾಂಕ್‌ನಿಂದ ಮಾರ್ಗನ್ಸ್‌ಗೇಟ್ ಆಗಿ ಜಪ್ಪಿನಮೊಗರುವಿನಲ್ಲಿ ಹೆದ್ದಾರಿ ತಲುಪುವ ರಸ್ತೆ ಕಳೆದ ಸುಮಾರು ಮೂರು ವರ್ಷಗಳಿಂದ ಬಂದ್ ಆಗಿ, ನಗರದ ಇತರ ಭಾಗಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ದೊರಕಿದ ರಿವರ್ ಫ್ರಂಟ್ ಯೋಜನೆಯ 1 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲು ಆಗಿಲ್ಲ ಎಂದು ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪಾಲಿಕೆ ಆಡಳಿತವನ್ನು ತರಾಟೆಗೈದರು.


ಹಿಂದಿನ ಮೇಯರ್‌ರವರು ತಮ್ಮ ಒಂದೂವರೆ ವರ್ಷದ ಆಡಳಿತಾವಧಿಯಲ್ಲಿ ಮಂಗಳಾದೇವಿ ದೇವಸ್ಥಾನದ ಎದುರು ಸಂಭವಿಸುವ ವಾಹನ ದಟ್ಟಣೆಗೆ ಪರಿಹಾರ ನೀಡುವಲ್ಲಿಯೂ ವಿಫಲರಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಾಹನ ದಟ್ಟಣೆಗೆ ಸಂಬಂಧಿಸಿ ಪ್ರತಿಪಕ್ಷ ನಾಯಕರ ಜತೆ ಸೇರಿ ಪರಿಹರಿಸಲು ನಾನು ಸಿದ್ಧನಿದ್ದೇನೆ. ಅದರ ಜತೆಯಲ್ಲಿ ನನ್ನ ಅವಧಿಯಲ್ಲಿ ಏನೆಲ್ಲಾ ಸುಧಾರಣೆ, ಅಭಿವೃದ್ಧಿ ಆಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.


ನಗರದ ಕದ್ರಿ ಮಾರುಕಟ್ಟೆ ಡೆಂೆ ಉತ್ಪತ್ತಿ ತಾಣವಾಗಿದೆ. ಮೊಣಕಾಲುವರೆಗೆ ಅಲ್ಲಿ ನೀರು ನಿಲ್ಲುತ್ತಿದೆ. ಕಳೆದ ಸಭೆಯಲ್ಲಿಯೂ ಡೆಂೆ ಬಗ್ಗೆ ಕ್ರಮಕ್ಕೆ ಆಗ್ರಹಿಸಲಾಗಿತ್ತು ಎಂದು ಸದಸ್ಯ ವಿನಯರಾಜ್ ಹೇಳಿದಾಗ, ನಗರ ವ್ಯಾಪ್ತಿಯ 10 ಆರೋಗ್ಯ ಕೇಂದ್ರಗಳ ವೈದ್ಯರ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೂಲಕ ನಗರದಲ್ಲಿ ಮನೆಗಳ ಸರ್ವೆ ಕಾರ್ಯ, ಜಾಗೃತಿಯ ನೀಡುತ್ತಿರುವ ಬಗ್ಗೆ ಮೇಯರ್ ಸುಧೀರ್ ಶೆಟ್ಟಿ ಮಾಹಿತಿ ನೀಡಿದರು.


ಎಲ್‌ಇಡಿ ನವೆಂಬರ್‌ಗೆ ಪೂರ್ಣ
ನಗರದಲ್ಲಿ ಸುಮಾರು 78 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಂಡಿರುವ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಸಮಸ್ಯೆ ಕಳೆದ ನಾಲ್ಕೈದು ವರ್ಷಗಳಿಂದ ಮುಗಿದಿಲ್ಲ. ಅಳವಡಿಕೆ ಮಾಡಿರುವ ಕೆಲವೆಡೆ ನಿರ್ವಹಣೆಯಾಗುತ್ತಿಲ್ಲ ಎಂದು ಸದಸ್ಯ ವಿನಯರಾಜ್ ಸಭೆಯ ಗಮನ ಸೆಳೆದಾಗ, ಆಡಳಿತ ಪಕ್ಷದ ಸದಸ್ಯೆ ಶ್ವೇತಾ ಪೂಜಾರಿ ಅವರೂ ದನಿಗೂಡಿಸಿದರು.


ಈ ಬಗ್ಗೆ ಕೆಲಹೊತ್ತು ಚರ್ಚೆಯ ಬಳಿಕ ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭಾ ಅವರು ಮಾಹಿತಿ ನೀಡಿ, ಕೆಲ ಸಮಯದ ಹಿಂದಷ್ಟೇ ಎಲ್‌ಇಡಿ ಅಳವಡಿಕೆಯನ್ನು ಫಿಝಾ ಡೆವಲಪರ್ಸ್ ಸಂಸ್ಥೆಗೆ ವಹಿಸಲಾಗಿದ್ದು, 50,000 ಎಲ್‌ಇಡಿಗಳನ್ನು ಖರೀದಿಸುತ್ತಿದ್ದಾರೆ. ನವೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.


ರುದ್ರ ಭೂಮಿಯಲ್ಲಿ ವಾಹನ ಪಾರ್ಕಿಂಗ್ ಸಲ್ಲದು
ಸುರತ್ಕಲ್ ಹಿಂದೂ ರುದ್ರ ಭೂಮಿಯಲ್ಲಿ ಕಸ ಸಾಗಾಟದ ವಾಹನಗಳ ಪಾರ್ಕಿಂಗ್‌ಗೆ ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡದೆ ಪಾಲಿಕೆ ಆಯುಕ್ತರು ಅವಕಾಶ ಕಲ್ಪಿಸಿದ್ದಾರೆ. ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲಿ ಯಾವುದೇ ಕಾರಣಕ್ಕೂ ತ್ಯಾಜ್ಯ ಸಾಗಾಟದ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬಾರದು ಎಂದು ಸದಸ್ಯೆ ಶ್ವೇತಾ ವಿರೋಧ ವ್ಯಕ್ತಪಡಿಸಿದರು. ಅಲ್ಲಿ ಬದಲಿ ಸರ್ಕಾರಿ ಜಾಗ ಇದ್ದರೆ ಪರಿಶೀಲಿಸುವಂತೆ ಮೇಯರ್ ಸೂಚಿಸಿದರು.


ಸಿಟಿ ಬಸ್‌ಗಳಿಂದ ಟ್ರಿಪ್ ಕಟ್
ನಗರದ ಕೆಲವೊಂದು ಭಾಗಗಳಿಗೆ ಸಿಟಿ ಬಸ್‌ಗಳು ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಾಗ ಟ್ರಿಪ್ ಕಟ್ ಮಾಡುತ್ತಿದೆ. ಬಜಾಲ್, ಫೈಝಲ್ ನಗರ, ಕುಡುಪು, ನೀರುಮಾರ್ಗ ಮೊದಲಾದ ಕಡೆಗಳಿಗೆ ರಾತ್ರಿ 6 ಗಂಟೆಯ ನಂತರ ಬಸ್‌ಗಳು ತೆರಳುತ್ತಿಲ್ಲ. ಸರ್ಕಾರಿ ಬಸ್‌ಗಳನ್ನು ಹಾಕಿದಾಗ ಅವರಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ರವೂಫ್, ಭಾಸ್ಕರ ಕೆ. ಹಾಗೂ ಸುಧೀರ್ ಶೆಟ್ಟಿ ಆಗ್ರಹಿಸಿದರು.


ಬೋಂದೆಲ್ ಚರ್ಚ್ ಬಳಿ ಹಂಪ್ಸ್ ನಿರ್ಮಿಸಿ
ವಿಮಾನ ನಿಲ್ದಾಣ ರಸ್ತೆಯ ಬೋಂದೆಲ್ ಚರ್ಚ್ ಬಳಿ ಪಚ್ಚನಾಡಿಗೆ ತಿರುಗುವ ಸ್ಥಳ ಅಪಾಯಕಾರಿಯಾಗಿದೆ. ಅಲ್ಲಿ ಯಾವುದೇ ಬ್ಯಾರಿಕೇಡ್ ಆಗಲಿ, ಪೊಲೀಸ್ ವೃತ್ತವಾಗಲಿ ಇಲ್ಲ. ಆಗಾಗ ಅಪಘಾತಗಳು ನಡೆಯುತ್ತಿದ್ದು, ಅಲ್ಲಿಗೆ ಹಂಪ್ಸ್ ಅಳವಡಿಸುವ ಕೆಲಸ ಶೀಘ್ರ ಆಗಬೇಕು. ಪದವಿನಂಗಡಿ ಕೊರಗಜ್ಜನ ಗುಡಿಯ ಬಳಿಯೂ ಅವೈಜ್ಞಾನಿಕವಾಗಿ ಡಿವೈಡರ್ ತೆರವು ಮಾಡಿ ವಾಹನಗಳು ಯು ಟರ್ನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸದಸ್ಯೆ ಸಂಗೀತಾ ನಾಯಕ್ ಒತ್ತಾಯಿಸಿದರು.


ಉಪ ಮೇಯರ್ ಸುನೀತಾ, ಆಯುಕ್ತ ಆನಂದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ ಉಪಸ್ಥಿತರಿದ್ದರು.