ಜಿಲ್ಲೆ

ಕೋಟ್ಯಂತರ ರೂ. ಖರ್ಚು ಬಿಗಡಾಯಿಸಿದ ಒಳಚರಂಡಿ ಸಮಸ್ಯೆಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ


ಮಂಗಳೂರು: ಸ್ಮಾರ್ಟ್‌ಸಿಟಿ, ಅಮೃತ್ ಮೊದಲಾದ ಯೋಜನೆ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಒಳಚರಂಡಿ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿದೆ. ಹಲವು ವಾರ್ಡ್‌ಗಳಲ್ಲಿ ಇನ್ನೂ ಮನೆಗಳಿಗೆ ಒಳಚರಂಡಿ ಸಂಪರ್ಕವೇ ಕಲ್ಪಸಿಲ್ಲ ಎಂಬ ಆಕ್ರೋಶ ಮಹಾನಗರ ಪಾಲಿಕೆ ಸದಸ್ಯರಿಂದ ವ್ಯಕ್ತವಾಯಿತು.


ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಬಂದರು ವಾರ್ಡ್‌ನ ಒಳಚರಂಡಿ ಸಮಸ್ಯೆ ಬಗ್ಗೆ ಕಳೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ನೀಡಿದ ಭರವಸೆ ಪ್ರಕಾರ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಾರೆಯೇ ಹೊರತು ಪರಿಹಾರ ಕ್ರಮ ಆಗಿಲ್ಲ. ಒಳಚರಂಡಿ ವ್ಯವಸ್ಥೆಯ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿಲ್ಲ. ಕೆಲಸ ಮಾಡದಿದ್ದರೂ ಪಾಲಿಕೆಯಿಂದ ವೇತನ ಪಾವತಿಸಲಾಗುತ್ತಿದೆ ಎಂದು ವಿಪಕ್ಷ ನಾಯಕ ನವೀನ್ ಡಿಸೋಜ ಸಭೆಯ ಆರಂಭದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು.


ಎಡಿಬಿ ಪ್ರಥಮ ಹಂತದ ಯೋಜನೆಯ ಕಾಮಗಾರಿ ಮುಗಿದರೂ ಇನ್ನೂ ವೆಟ್‌ವೆಲ್‌ಗಳು ಕಾರ್ಯಾರಂಭಿಸಿಲ್ಲ ಎಂದು ಸದಸ್ಯ ಅಬ್ದುಲ್ ರವೂಫ್ ಆರೋಪಿಸಿದರೆ, ಭಾನುವಾರ ದಿನ ಒಳಚರಂಡಿ ಸಮಸ್ಯೆ ನಿರ್ವಹಣೆಗೆ ಸಿಬ್ಬಂದಿಯೇ ಇರುವುದಿಲ್ಲ ಎಂದು ಹಿರಿಯ ಸದಸ್ಯ ಲ್ಯಾನ್ಸಿ ಲೋಟ್ ಪಿಂಟೋ ಹೇಳಿದರು.


ಮನಪಾ ವ್ಯಾಪ್ತಿಯ 800 ಕಿ.ಮೀ. ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯಡಿ 24 ವೆಟ್‌ವೆಲ್‌ಗಳು 4 ಎಸ್‌ಟಿಪಿಗಳಿವೆ. ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಒಳಚರಂಡಿ ನೀರು ತೆರೆದ ಚರಂಡಿಯಲ್ಲಿ ಹರಿದು ಸಮುದ್ರ, ನದಿ ಸೇರುತ್ತಿದೆ. ಬಾವಿಗಳು ಕಲುಷಿತಗೊಳ್ಳುತ್ತಿವೆ. ಒಳಚರಂಡಿ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸದ ಕಾರಣ ಕಲುಷಿತ ನೀರು ನಂದಿನಿ, ಫಲ್ಗುಣಿ ನದಿ ಒಡಲು ಸೇರುತ್ತಿದೆ. ಈ ವಿಫಲತೆಗೆ ಅಧಿಕಾರಿಗಳು ಜವಾಬ್ಧಾರರು ಎಂದು ಸದಸ್ಯ ಎ.ಸಿ. ವಿನಯರಾಜ್ ಆರೋಪಿಸಿದರು.


ನಂತೂರಿನಿಂದ ನೇತ್ರಾವತಿ ರಾಜಕಾಲುವೆ ಟ್ರಂಕ್‌ಲೈನ್ 12 ಅಡಿ ಒಳಚರಂಡಿ ತ್ಯಾಜ್ಯದಿಂದ ತುಂಬಿದೆ. ನಮ್ಮ ಹಾಗೂ ಸುತ್ತಮುತ್ತಲಿನ ವಾರ್ಡ್‌ಗಳ ಮನೆಗಳವರಿಗೆ ಇನ್ನೂ ಒಳಚರಂಡಿಗೆ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ನಮ್ಮದು ಸಮುದ್ರ ಸಮೀಪದ ಪ್ರದೇಶ. ಮಳೆಗಾಲದಲ್ಲಿ ನಮ್ಮ ಅವ್ಯವಸ್ಥೆಯ ಬಗ್ಗೆ ಕೇಳುವವರು ಯಾರು? ಮೂರು ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದರೂ ಏನೂ ಆಗುತ್ತಿಲ್ಲ. ನಾವು ತ್ಯಾಜ್ಯ ವಿಲೇವಾರಿಯ ತೆರಿಗೆ ಕಟ್ಟುವುದಿಲ್ಲ ಎಂದು ಪ್ರವೀಣ್ ಚಂದ್ರ ಆಳ್ವ ಆಕ್ರೋಶ ವ್ಯಕ್ತಪಡಿಸದರೆ, ಸದಸ್ಯೆ ವೀಣಾ ಮಂಗಳ ಅವರೂ ದನಿಗೂಡಿಸಿದರು.


ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ,ಬಹುತೇಕ ಸದಸ್ಯರಿಂದ ಒಳಚರಂಡಿ ನಿರ್ವಹಣೆ ನಿಂತು ಹೋಗಿರುವ ಬಗ್ಗೆ ದೂರುಗಳು ಬಂದಿವೆ. ಇದಕ್ಕೊಂದು ವಿಂಗ್ ಮಾಡಬೇಕಿದೆ. ಕನ್ಸಲ್ಟೆಂಟ್ ನೇಮಕ ಮಾಡಬೇಕು. ಪ್ರತ್ಯೇಕ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂದರು.
ಒಳಚರಂಡಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಕನ್ಸಲ್ಟೆನ್ಸಿಗಳ ಜತೆ ಚರ್ಚಿಸಿ ಸಮಗ್ರ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ತಿಳಿಸಿದರು.