ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಆರು ವರ್ಷಗಳಿಂದ ಬಡವರಿಗೆ ಒಂದು ಮನೆ ಕೂಡಾ ನಿರ್ಮಾಣ ಮಾಡಿ ಕೊಟ್ಟಿಲ್ಲ ಎಂದು ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವರ ಹೇಳಿಕೆ ಆಡಳಿತ ಮತ್ತು ವಿಪಕ್ಷ ಸದಸ್ಯರ ವಾಕ್ಸಮರಕ್ಕೆ ಕಾರಣವಾಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಪ್ರವೀಣ್‌ಚಂದ್ರ ಆಳ್ವರು ವಿಷಯ ಪ್ರಸ್ತಾಪಿಸಿ, ‘ನಾನು ಮೊದಲ ಬಾರಿಗೆ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದ ವೇಳೆ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 900 ಮಂದಿ ನಿವೇಶನರಹಿತರಿಗೆ ಹಕ್ಕುಪತ್ರ ನೀಡಲಾಗಿತ್ತು. ಅಂದು ಸಂಭ್ರಮ ಪಟ್ಟಿದ್ದೆ. ಆದರೆ ಬಳಿಕ ಆರು ವರ್ಷಗಳಲ್ಲಿ ಒಬ್ಬರಿಗೂ ಮನೆ ನೀಡುವ ಕಾರ್ಯ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿಲ್ಲ. ಶಾಸಕರು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರಾದ ಜಗದೀಶ್ ಶೆಟ್ಟಿ, ಶಕಿಲಾಕಾವ ಮೊದಲಾದವರು ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ. ಶಕ್ತಿನಗರದಲ್ಲಿ ನಿಮ್ಮ ಹಿಂದಿನ ಶಾಸಕರ ಎಡವಟ್ಟಿನಿಂದಾಗಿ ವಿಳಂಬವಾಗಿದೆ. ಅವರು ಮನೆಯೇ ಕೊಡದೆ ನಿಮಗೆ ಸಂತಸ ಹೇಗೆ ಆಗಿದ್ದು ಎಂದು ಹೇಳುತ್ತಿದ್ದಂತೆಯೇ ಸದನದಲ್ಲಿ ಸದಸ್ಯರ ನಡುವಿನ ವಾಕ್ಸಮರವು ಗದ್ದಲಕ್ಕೆ ಕಾರಣವಾಯಿತು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿ, ರಾಜಕಾರಣ ಮಾಡುವ ಉದ್ದೇಶದಿಂದ ಈ ವಿಷಯ ಪ್ರಸ್ತಾಪಿಸಲಾಗಿದೆ. ಮೇಯರ್ ವ್ಯಾಪ್ತಿಗೆ ಈ ವಿಷಯವೇ ಬರುವುದಿಲ್ಲ. ಹಿಂದಿನ ಶಾಸಕರು ಚುನಾವಣೆಯ ಹಿನ್ನೆಲೆಯಲ್ಲಿ ಶಕ್ತಿನಗರದಲ್ಲಿ ಅನವುಮೋದನೆ ಸಿಗದೆಯೇ ಹಕ್ಕುಪತ್ರ ಹಂಚಿದ್ದರು ಎಂದು ಆರೋಪಿಸಿದರು. ಡಬಲ್ ಇಂಜಿನ್ ಸರ್ಕಾರ ಇದ್ದಾಗ ಒಂದು ಮನೆ ನಿರ್ಮಾಣ ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಎ.ಸಿ.ವಿನಯರಾಜ್ ಪ್ರಶ್ನಿಸಿದರು.
‘ಇದು ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಡಜನರ ಸಮಸ್ಯೆ. ಕೇಂದ್ರ, ರಾಜ್ಯ ಸರ್ಕಾರದ ಜತೆ ಸ್ಥಳೀಯ ಅನುದಾನದಲ್ಲಿ ಮನೆ ನಿರ್ಮಿಸಿ ಕೊಡುವ ಯೋಜನೆ. ಶಕ್ತಿನಗರದಲ್ಲಿ ಹಿಂದೆ ನಮ್ಮ ಶಾಸಕರ ವಿರುದ್ಧ ಆರೋಪ ಮಾಡಿ ತಪ್ಪು ಮಾಹಿತಿ ನೀಡಿ ಅಲ್ಲಿ ಮನೆಯೇ ಕಟ್ಟಲು ಸಾಧ್ಯವಿಲ್ಲ ಎನ್ನಲಾಗಿತ್ತು. ಹಾಗಿದ್ದರೆ ಆರು ವರ್ಷದಲ್ಲಿ ಹಾಲಿ ಶಾಸಕರು ಎಷ್ಟು ಮನೆ ನೀಡಿದ್ದಾರೆ. ನಾವಿಲ್ಲಿ ರಾಜಕೀಯ ಮಾಡುತ್ತಿಲ್ಲ. ಜನರ ಸಮಸ್ಯೆ ಹೇಳುತ್ತಿದ್ದೇವೆ. 60 ವಾರ್ಡ್ ಸದಸ್ಯರಿಗೂ ತಮ್ಮ ವ್ಯಾಪ್ತಿಯ ಅರ್ಜಿದಾರರಿಗೆ ಮನೆ ನೀಡಲು ಸಾಧ್ಯವಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ನಾವು ಕೊಡಿಸುತ್ತೇವೆ. ನಿಮಗೆ ಸಹಕಾರ ನಾವು ನೀಡುತ್ತೇವೆ’ ಎಂದು ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಏರುಧ್ವನಿಯಲ್ಲಿಯೇ ಪ್ರತಿಕ್ರಿಯಿಸಿದರು.
ಈ ಸಂದರ್ಭ ಪಾಲಿಕೆ ಆಯುಕ್ತ ಆನಂದ್ ಮಾಹಿತಿ ನೀಡಿ, ಸುರತ್ಕಲ್ ಇಡ್ಯಾದ ಸ.ನಂ. 16 ಪಿ1ರಲ್ಲಿ ಜಿ+3 ಮಾದರಿಯ 600 ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದೆ. 330 ಸಾಮಾನ್ಯ, ಎಸ್‌ಸಿ 58, ಎಸ್‌ಟಿ 13, ಅಲ್ಪಸಂಖ್ಯಾತರು 199 ಸೇರಿದಂತೆ 600 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇಡ್ಯಾ ಸ.ನಂ. 108/1ಎ 1ಬಿ ಯಲ್ಲಿ 192 ವಸತಿ ಸಂಕೀರ್ಣಕ್ಕಾಗಿ 186 ಸಾಮಾನ್ಯ, 5 ಎಸ್‌ಸಿ, 1 ಎಸ್‌ಟಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಪದವು ಶಕ್ತಿನಗರದ ಸ.ನಂ. 82ರಲ್ಲಿ 930 ವಸತಿ ಸಂಕೀರ್ಣಕ್ಕಾಗಿ 859 ಸಾಮಾನ್ಯ, 62 ಎಸ್‌ಸಿ, 9 ಎಸ್‌ಟಿ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಬಜಾಲ್ ಎಸ್‌ಟಿಪಿ ವಾರದೊಳಗೆ ಕಾರ್ಯಾಚರಣೆ
ವಿಪಕ್ಷ ಸದಸ್ಯರು ಕಳೆದ ಸಭೆಯಲ್ಲಿ ನಗರದ ಎಸ್‌ಟಿಪಿಗಳ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಜಾಲ್‌ನ ವೆಟ್‌ವೆಲ್ 15ನೆ ಹಣಕಾಸು ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಜಲ್ಲಿಗುಡ್ಡ, ಕಡೇಕಾರು ವೆಟ್‌ವೆಲ್ ಕಾಮಗಾರಿ ಮಾಡಲಾಗಿದ್ದು, ಬಜಾಲ್ ಎಸ್‌ಟಿಪಿ ವಾರದೊಳಗೆ ಕಾರ್ಯಾಚರಣೆ ಮಾಡಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.
ಪಿಲಿಕುಳ ಎಸ್‌ಟಿಪಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಪಂಪ್ ಅಳವಡಿಸಲಾಗುವುದು. ಎಸ್‌ಟಿಪಿಯ ಬಾಕಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಳಚರಂಡಿ ನೀರು ನದಿ ಹಾಗೂ ನದಿ ಮೂಲಗಳಿಗೆ ಹರಿವುದನ್ನು ತಡೆಯಲು ಹೆಚ್ಚುವರಿ ಅನುದಾನ ಅಗತ್ಯವಿದೆ. ಎನ್‌ಜಿಟಿಯಿಂದ 40 ಕೋಟಿ ರೂ. ನಗರಕ್ಕೆ ಒದಗಿಸುವುದಾಗಿ ನಗರಾಭಿವೃದ್ಧಿ ಸಚಿವರು ಭರವಸೆ ನೀಡಿದ್ದು, ಡಿಪಿಆರ್ ಮಾಡಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮೇಯರ್ ಹೇಳಿದರು.
ನೀರಿನ ಪೂರೈಕೆ ಜಾಲದಂತೆ ನಗರದಲ್ಲಿ ಒಳಚರಂಡಿ ವ್ಯವಸ್ಥೆಯ ಜಾಲದ ನಿರ್ವಹಣೆಗೆ ಸೂಕ್ತ ಸಮಿತಿ ರಚನೆಯಾಗಬೇಕು ಎಂದು ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಆಗ್ರಹಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವರುದ್ರಪ್ಪ ಅವರನ್ನು ಮೇಲ್ವಿಚಾರಣೆಗೆ ನೇಮಕ ಮಾಡಲಾಗಿದೆ ಎಂದು ಮೇಯರ್ ಹೇಳಿದರು.