ಮಂಗಳೂರು: ಚೆಕ್ ಅಮಾನ್ಯ ಪ್ರಕರಣ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಪುದು ಗ್ರಾಮದ ಹಸನಬ್ಬ ಅವರಿಗೆ 2.50 ಲಕ್ಷ ರೂ. ಶಿಕ್ಷೆ ಪ್ರಕಟಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಫರಂಗಿಪೇಟೆ ಶಾಖೆಯಿಂದ ಹಸನಬ್ಬ ಅವರು 2012ರಲ್ಲಿ ಅಡವು ಸಾಲ ಪಡೆದುಕೊಂಡಿದ್ದರು. ಬ್ಯಾಂಕಿನಿಂದ ಸಾಲ ಪಡೆದಕೊಂಡ ಬಳಿಕ ಸರಿಯಾದ ಸಮಯಕ್ಕೆ ಹಣ ಮರುಪಾವತಿಸದೆ ಸಾಲವನ್ನು ಸುಸ್ತಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಸನಬ್ಬ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಅವರ ಆಸ್ತಿಯನ್ನು ಹರಾಜಿಗಿಡುವ ಸಂದರ್ಭದಲ್ಲಿ ಹಸನಬ್ಬ ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿತ್ತು.
ನಾನು ಬ್ಯಾಂಕ್ ನಲ್ಲಿ ಯಾವುದೇ ಲೋನ್ ತೆಗೆದುಕೊಂಡಿಲ್ಲ ಮತ್ತು ಯಾವುದೇ ಚೆಕ್ ನೀಡಿಲ್ಲ. ಆದುದರಿಂದ ನಾನು ಬ್ಯಾಂಕಿಗೆ ಯಾವುದೇ ಹಣ ಕಟ್ಟಲು ಬಾಕಿ ಇಲ್ಲ ಎಂದು ಹಸನಬ್ಬ ನ್ಯಾಯಾಲಯಕ್ಕೆ ಸಾಕ್ಷಿ ನೀಡಿದ್ದ. ಅಲ್ಲದೆ, ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಸುಳ್ಳು ಮನವಿಯನ್ನೂ ಮಾಡಿದ್ದ.
ಆದರೆ, 2019ರಲ್ಲಿ ಹಸನಬ್ಬ ತನ್ನ ಆಸ್ತಿಯ ಹರಾಜಿಗಿಟ್ಟ ಸಂದರ್ಭದಲ್ಲಿ ನೀಡಲಾಗಿದ್ದ ಮನವಿ ಪತ್ರವನ್ನು ಹಾಗೂ ಸಾಲದ ತಖ್ತೆ ಸಹಿತ ದಾಖಲೆಗಳನ್ನು ಪರಿಗಣಿಸಿದ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಸದ್ರಿ ಪ್ರಕರಣದ ಅಪರಾಧಿ ಎಂದು ತೀರ್ಮಾನಿಸಿತು.
ಅಪರಾಧಿ ಹಸನಬ್ಬ ಅವರು ಬ್ಯಾಂಕಿಗೆ 2,50 ಲಕ್ಷ ರೂ. ಪರಿಹಾರ ನೀಡಬೇಕು, ಜೊತೆಗೆ 10 ಸಾವಿರ ರೂ. ದಂಡ ಪಾವತಿಸಬೇಕು ಹಾಗೂ ಇದಕ್ಕೆ ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ಭಾಗ್ಯಮ್ಮ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಪರ ವಕೀಲ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.