ಜಿಲ್ಲೆ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಾಂತ್ರಿಕ ಸಮಸ್ಯೆ ರೈಲುಗಳ ಸಂಚಾರ ನಾಲ್ಕು ಗಂಟೆ ವಿಳಂಬ

ಹರೀಶ ಎಂ.

ಮಂಗಳೂರು: ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ಉಂಟಾದ ತಾಂತ್ರಿಕ ಅಡಚಣೆ ಕಾರಣ ಈ ಮಾರ್ಗದಲ್ಲಿ ಓಡಾಟ ನಡೆಸುವ ಎಲ್ಲ ರೈಲುಗಳ ಓಡಾಟದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ವ್ಯತ್ಯಯ ಉಂಟಾಯಿತು.

ಸೆಂಟ್ರಲ್ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಸಂಜೆ 3.40 ರ ಸುಮಾರಿಗೆ ಸಿಗ್ನಲ್ ಸಮಸ್ಯೆ ಉಂಟಾಗಿದೆ. ಅಷ್ಟರಲ್ಲೇ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ಹಾಗೂ ಅಲ್ಲಿಂದ ತೆರಳುವ ರೈಲುಗಳು ಮುಂದಕ್ಕೆ ಸಂಚರಿಸಲು ಸಾಧ್ಯವಾಗಲಿಲ್ಲ. ಮಂಗಳೂರು ಸೆಂಟ್ರಲ್-ಮಡಗಾಂವ್ ಮೆಮು ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ ನಿರ್ಗಮಿಸಿದ ಬಳಿಕ ಎಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಸಂಜೆ ಮಂಗಳೂರು ಸೆಂಟ್ರಲ್‌ನ ಫ್ಲ್ಯಾಟ್‌ಫಾರಂ ಬಂದು ತಲುಪಿದೆ. ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ ವಿಳಂಬವಾಗಿ ಹೊರಟಿದೆ. ಮಂಗಳೂರು ಸೆಂಟ್ರಲ್-ಎಂ.ಜಿ.ಆರ್. ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಿಳಂಬವಾಗಿ ಮಂಗಳೂರು ಸೆಂಟ್ರಲ್‌ನಿಂದ ಹೊರಟಿದೆ. ತಾಂತ್ರಿಕ ತೊಂದರೆಯನ್ನು ಕೆಲವೇ ಸಮಯದಲ್ಲಿ ರೈಲ್ವೆ ತಾಂತ್ರಿಕ ಸಿಬ್ಬಂದಿ ಸರಿಪಡಿಸಿದ್ದು, 6.45ರ ವೇಳೆಗೆ ರೈಲು ಕಾರ್ಯಾಚರಣೆ ಪುನರಾರಂಭಗೊಂಡಿತು. ತಡವಾಗಿ ತೆರಳಿದ ರೈಲುಗಳು ತಮ್ಮ ಗಮ್ಯ ಸ್ಥಾನವನ್ನು ತಲುಪುವ ವೇಳೆಗೆ ಸಮಯವನ್ನು ಸರಿದೂಗಿಸಿಕೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.