ಜಿಲ್ಲೆ

1.57 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ ಮೂವರು ಆರೋಪಿಗಳ ಬಂಧಿಸಿದ ಸಿಸಿಬಿ ಪೊಲೀಸರು

ಮಂಗಳೂರು: ನಗರದ ಪಂಪ್‌ವೆಲ್‌ನಲ್ಲಿ 1.57 ಕೋಟಿ ರೂ. ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದು, ಅವರಿಂದ ಒಟ್ಟು 1,62,80,000 - ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.


ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಪ್ರಸ್ತುತ ವಿಟ್ಲ ಮಂಗಿಲಪದವು ಪಾತಿರತೋಟ ಹೌಸ್‌ನ ಪ್ಯಾರೇಜಾನ್ ಸೇಟು (37), ವಿಟ್ಲ ಮಂಗಿಲ ಪದವು ಪಾತಿರತೋಟ ನಿವಾಸಿ ಬದ್ರುದ್ದೀನ್ ಯಾನೆ ಬದ್ರು (28), ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ರಾಜೇಶ್ ಆರ್. (22) ಬಂಧಿತರು.
ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ ಶನಿವಾರ ನಾಲ್ವರು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1,57,50,000 ರೂ. ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ 1,57,50,000 ರೂ. ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್), ತಲಾ 10 ಸಾವಿರ ರೂ. ಮೌಲ್ಯದ 3 ಮೊಬೈಲ್ ಫೋನ್‌ಗಳು, 5 ಲಕ್ಷ ರೂ. ಮೌಲ್ಯದ 1ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್, ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ಅವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.