ಜಿಲ್ಲೆ

ಮಾದಕವಸ್ತು ಕೋಕೇನ್ ಪೂರೈಕೆ ನೈಜೀರಿಯಾ ಪ್ರಜೆ ಬಂಧನ

ಮಂಗಳೂರು:ಗೋವಾ ರಾಜ್ಯದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಮಾರಾಟ ಮಾಡುತ್ತಿದ್ದ ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿರುವ ನೈಜಿರಿಯಾ ದೇಶದ ಪ್ರಜೆಯನ್ನು ಪತ್ತೆ ಹಚ್ಚಿ 30 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮೈಕೆಲ್ ಒಕ್ಫಾರ್ ಒಡಿಕ್ಪೋ (44) ಬಂಧಿತ.

ಪ್ರಕರಣದ ವಿವರ : 2024 ನೇ ಮಾರ್ಚ್ ತಿಂಗಳಲ್ಲಿ ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ನ್ನು ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ನಿವಾಸಿಗಳಾದ ಸದಕತ್.ಯು ಶಾನ್ ನವಾಜ್, ಮಹಮ್ಮದ್ ಅಶ್ಫಕ್ ಅಶ್ಫಾ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸ ರು ಬಂಧಿಸಿದ್ದರು. ಇವರು ಗೋವಾ ರಾಜ್ಯದಿಂದ ಕೋಕೆನ್ ನ್ನು ಖರೀದಿಸಿಕೊಂಡು ಬಂದಿದ್ದರು. ಅವರ ವಶದಿಂದ 34 ಗ್ರಾಂ ಕೋಕೆನ್ ಹಾಗೂ ಇತರ ಒಟ್ಟು ರೂ. 2,72,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕೋಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಗೋವಾ ರಾಜ್ಯದ ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿಂದ ವಶಕ್ಕೆ ಪಡೆದಿದ್ದಾರೆ.

ಆತನ ವಶದಿಂದ 30 ಗ್ರಾಂ ಕೋಕೇನ್, ಸಾಗಾಟಕ್ಕೆ ಉಪಯೋಗಿಸಿದ ಬೊಲೆನೋ ಕಾರು, ಮೊಬೈಲ್ ಫೋನ್ ಗಳು-2, ನಗದು ಹಣ 4500 ರೂ. ಡಿಜಿಟಲ್ ತೂಕ ಮಾಪನ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ11,25,000 ರೂ. ಆಗಿರುತ್ತದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿಯು 2012 ನೇ ಇಸವಿಯಲ್ಲಿ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಬಂದು ಮುಂಬೈಯಲ್ಲಿ ಸುಮಾರು ಒಂದೂವರೆ ವರ್ಷ ವಾಸ್ತವ್ಯವಿದ್ದವನು. ನಂತರ ಗೋವಾಕ್ಕೆ ಬಂದು ಗೋವಾದಲ್ಲಿ ವಾಸ್ತವ್ಯವಿದ್ದು ಮಾದಕ ವಸ್ತು ಮಾರಾಟ ಮಾಡುತ್ತಿರುವುದಾಗಿದೆ. ಈತನ ವಿರುದ್ದ ಈಗಾಗಲೇ ಗೋವಾದಲ್ಲಿ ಒಟ್ಟು 3 ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.