ಜಿಲ್ಲೆ

ಕ್ಯಾಟರಿಂಗ್ ಮಾಲೀಕರ ಸಂಘದಿಂದ ರಕ್ತದಾನ ಶಿಬಿರ ರಕ್ತದಾನ ಮಾಡುವ ಮೂಲಕ ಎಸಿಪಿ ನಜ್ಮಾ ಫಾರುಕಿ ಉದ್ಘಾಟನೆ

ಮಂಗಳೂರು: ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲೀಕರ ಸಂಘದ ವತಿಯಿಂದ ಮಂಗಳೂರಿನ ಸಂಘದ ಕಚೇರಿಯಲ್ಲಿ ಮಂಗಳವಾರ ರಕ್ತದಾನ ಶಿಬಿರ ಜರುಗಿತು.


ಮಂಗಳೂರು ಸಂಚಾರಿ ವಿಭಾಗದ ಸಹಾಯಕ ಆಯುಕ್ತೆ ನಜ್ಮಾ ಫಾರೂಕಿ ಸ್ವತಃ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಯಾಟರಿಂಗ್ ವಾಹನಗಳಿಗೆ ಬಳಸಲು ಸ್ಟಿಕ್ಕರ್ ಬಿಡುಗಡೆಗೊಳಿಸಿದರು. ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚಾಗುತ್ತಿದೆ, ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಚಿಕಿತ್ಸೆ ಪಡೆಯುವ ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನದಂತಹ ಪುಣ್ಯಕಾರ್ಯದಿಂದ ಅನೇಕ ಜೀವಗಳ ಉಳಿಸಲು ಸಾಧ್ಯವಿದೆ ಎಂದರು.
ಮಂಗಳೂರಿನ ಜನತೆ ಸಂಚಾರಿ ಕಾನೂನು ಪಾಲನೆ ಮಾಡುವ ಮೂಲಕ ಕೈ ಜೋಡಿಸಬೇಕು. ಇದರಿಂದ ವಾಹನ ಸವಾರರಿಗೂ ಹಾಗೂ ಇತರ ಸವಾರರಿಗೂ ಸುರಕ್ಷತೆ ಸಿಗಲು ಸಾಧ್ಯ. ಯಾವುದೇ ತಪಾಸಣೆಯ ಸಂದರ್ಭ ವಾಹನದಲ್ಲಿ ಸಮರ್ಪಕ ವಾಹನದ ಕಾಗದಪತ್ರಗಳನ್ನು ಇಟ್ಟುಕೊಳ್ಳಬೇಕು ಎಂದರು.


ಕೆ ಎಂ ಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಜಾನೆಟ್ ಅವರು ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲೀಕರ ಸಂಘದ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಕ್ಯಾಟರಿಂಗ್ ಮಾಲೀಕರ ಸಂಘ ಆಹಾರ ಪೂರೈಕೆಯ ಸಂದರ್ಭ ಪೊಲೀಸ್ ತಪಾಸಣೆಯ ಸಂದರ್ಭ ವಿಳಂಬವಾಗದಂತೆ ಕ್ಯಾಟರಿಂಗ್ ವಾಹನಗಳಿಗೆ ಸ್ಟಿಕ್ಕರ್ ಅಳವಡಿಕೆಯ ಮನವಿ ಮಾಡಿದ ಮೇರೆಗೆ ನಜ್ಮಾ ಫಾರೂಕಿ ಅವರು ಸಹಕಾರವನ್ನು ನೀಡಿದ್ದಾರೆ ಎಂದರು.


ಕ್ಯಾಟರಿಂಗ್ ವಾಹನಗಳಿಗೆ ಸ್ಟಿಕ್ಕರ್ ನೀಡಲಾಗುತ್ತಿದ್ದು ವಾಹನ ಸಂಚಾರಿ ಕಾನೂನುಗಳಿಗೆ ಅನುಗುಣವಾಗಿ ಸಮರ್ಪಕ ಲೈಸೆನ್ಸ್ , ವಿಮೆ, ಹೊಗೆ ತಪಾಸಣೆ ,ಚಾಲಕ ಲೈಸೆನ್ಸ್ ಸಹಿತ ಕಾಗದ ಪತ್ರ ಹೊಂದಿರಬೇಕು. ಯಾವುದೇ ಇತರ ಸಾಮಗ್ರಿಗಳನ್ನ ಸಾಗಿಸುವಂತಿಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿ ಕ್ಯಾಟರಿಂಗ್ ನಡೆಸುವ ಮಾಲೀಕರದ್ದಾಗಿದೆ ಎಂದರು.


ಸಂಘದ ಗೌರವಾಧ್ಯಕ್ಷ ಸುಧಾಕರ ಕಾಮತ್, ಸಂಘದ ಪ್ರಮುಖರಾದ ವೆವೆಲ್ ಲಸ್ರಾದೋ, ಎಂ.ಎಸ್ ಇಕ್ಬಾಲ್ , ಆದಿಲ್ ರೇಗೋ,
ವಿಜಯ್ ಕುಮಾರ್ , ಜಸ್ವಂತ್, ರಾಜೇಶ್ , ವಿಜಯ್, ಯಶವಂತ್, ಬಾಲಕೃಷ್ಣ, ಪ್ರಸಾದ್ ಅಂಚನ್, ಹರೀಶ್ ರಂಗೋಲಿ ಮತ್ತಿತರರು ಉಪಸ್ಥಿತರಿದ್ದರು.