ಮಂಗಳೂರು: ಕಾರ್‌ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೂರು ರಥೋತ್ಸವ ಪ್ರಯುಕ್ತ ಬುಧವಾರ ಶ್ರೀ ದೇವರ ಅವಭೃತ (ಓಕುಳಿ ) ಮಹೋತ್ಸವ ಸಮಾಜದ ಸಾವಿರಾರು ಭಕ್ತರ ಹಾಗೂ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.
ವೆಂಕಟರಮಣ ದೇವಸ್ಥಾನದ ವರ್ಷಾವಧಿ ರಥೋತ್ಸವ ಕಾರ್ಯಕ್ರಮದ ಕೊನೆಯ ದಿನದಂದು ಓಕುಳಿ ಉತ್ಸವ ಆಚರಿಸಲಾಗುತ್ತದೆ. ಬಹುತೇಕವಾಗಿ ಜಿಎಸ್‌ಬಿ ಸಮುದಾಯದವರು ಭಾಗವಹಿಸುವ ಈ ಓಕುಳಿ ಹಬ್ಬದಲ್ಲಿ ಜಾತಿ, ಬೇಧ ಮರೆತು ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಸಂತಸ ಹಂಚಿಕೊಳ್ಳುವ ಮೂಲಕ ಪ್ರೀತಿ, ಸಹೋದರತ್ವ, ಬಾಂಧವ್ಯವನ್ನು ವ್ಯಕ್ತಪಡಿಸಿದರು.
ದೇವಸ್ಥಾನದ ಮುಂಭಾಗದಲ್ಲಿ ನಾಸಿಕ್ ಬ್ಯಾಂಡ್ ಲಯಕ್ಕೆ ಪೂರಕವಾಗಿ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುತ್ತಾ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಒಂದೆಡೆ ಯುವಕರು ಬಣ್ಣಗಳ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅಲ್ಲಲ್ಲಿ ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮತ್ತೆ ಹಲವರು ದೂರದಲ್ಲಿ ಈ ಸಂಭ್ರಮದ ಓಕುಳಿಯನ್ನು ಕಣ್ತುಂಬಿಕೊಂಡರು.
ಸರ್ವಾಭರಣ ಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಸಂತ ಮಂಟಪಕ್ಕೆ ತರಲಾಯಿತು. ಬಳಿಕ ವಸಂತ ಮಂಟಪದಲ್ಲಿ ವಿಶೇಷ ಪೂಜೆ, ಅಷ್ಟಾವಧಾನ ಸೇವೆ, ನೆರೆದ ಸಮಾಜ ಬಾಂಧವರಿಂದ ಮಡೆಸ್ನಾನ ಸೇವೆ ನಂತರ ಶ್ರೀಗಳವರಿಂದ ಪ್ರವಚನ ನಡೆಯಿತು.
ಶ್ರೀ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿರಿಸಿ ಐದು ಪೇಟೆ ಉತ್ಸವ ಭಕ್ತರ ಭುಜ ಸೇವೆಯೊಂದಿಗೆ ಜರಗಿತು. ಸಮಾಜದ ಪುರುಷರು ಮತ್ತು ಮಕ್ಕಳು ಅವಭೃತ ಮಹೋತ್ಸವದಲ್ಲಿ ಗುಲಾಬಿ, ಅರಸಿನ ಬಣ್ಣದ ನೀರಿನೊಂದಿಗೆ ಆಟವಾಡುತ್ತಿರುವ ದೃಶ್ಯ ರಥಬೀದಿಯಲ್ಲಿ ಕಂಡು ಬಂತು.
ಶ್ರೀ ದೇವರ ಪೇಟೆ ಉತ್ಸವ ರಥಬೀದಿ, ಉಮಾ ಮಹೇಶ್ವರ ದೇವಸ್ಥಾನ ರಸ್ತೆ, ಕೆಳಗಿನ ರಥ ಬೀದಿ, ಡೋಂಗೇರಕೇರಿ, ಚಾಮರಗಲ್ಲಿ ಮೂಲಕ ವಿ.ಟಿ ರಸ್ತೆಯಾಗಿ ಟ್ಯಾಂಕ್ ಕಾಲೋನಿಯಲ್ಲಿರುವ ಶ್ರೀನಿವಾಸ ಪಾಠಶಾಲೆಯಲ್ಲಿರುವ ಪುಷ್ಕರಣಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ನಡೆಯಿತು. ಶ್ರೀ ದೇವಳಕ್ಕೆ ಉತ್ಸವ ಮರಳಿದ ಬಳಿಕ ಧ್ವಜಾಅವರೋಹಣ ಬಳಿಕ ಮಹೋತ್ಸವ ಸಮಾಪನ ಗೊಂಡಿತು.
ಮಂಗಳೂರು ರಥೋತ್ಸವದ ಕೊನೇಯ ದಿನ ಶ್ರೀ ವೆಂಕಟರಮಣ ದೇವರ ಸನ್ನಿಧಾನದಲ್ಲಿ ಓಕುಳಿ ಸಂಭ್ರಮದಲ್ಲಿ ಭಾಗಿಯಾಗುವುದೇ ಸಂತೋಷ. ಎಲ್ಲಾ ಸಮುದಾಯದ ಜನ ಒಂದಾಗಿ ಪರಸ್ಪರ ಬಣ್ಣ ಹಚ್ಚುತ್ತಾ ಪಡುವ ಸಂಭ್ರಮದಲ್ಲಿ ಪ್ರೀತಿ, ಸಹೋದರತೆಯ ಬಾಂಧವ್ಯ ಸಾಕಾರವಾಗುತ್ತಿದೆ.
ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ