ಜಿಲ್ಲೆ

ಕೂಳೂರು ನದಿಯಲ್ಲಿ ರಾತ್ರಿ ತನಕ ಹುಡುಕಾಡಿದರೂ ಪತ್ತೆಯಾಗದ ಉದ್ಯಮಿ ಬಿ.ಎಂ.ಮುಮ್ತಾಝ್ ಅಲಿ

ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಉದ್ಯಮಿ ಬಿ.ಎಂ.ಮುಮ್ತಾಝ್ ಅಲಿ ಭಾನುವಾರ ಬೆಳಗ್ಗಿನ ಜಾವ ಕೂಳೂರುನಿಂದ ನಾಪತ್ತೆಯಾಗಿದ್ದಾರೆ.


ಅವರ ಬಿಎಂಡಬ್ಲೂೃ ಕಾರು ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆ ಮೇಲೆ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿದೆ. ಸೇತುವೆಯಿಂದ ನದಿಗೆ ಹಾರಿರುವ ಶಂಕೆಯಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕದಳ ಹಾಗೂ ಕೋಸ್ಟ್‌ಗಾರ್ಡ್ ತಂಡದ ಸಹಾಯದಿಂದ ಶೋಧ ಕಾರ್ಯ ಮುಂದುವರಿದಿದೆ. ರಾತ್ರಿಯಾದರೂ ಯಾವುದೇ ಕುರುಹು ಲಭಿಸಿಲ್ಲ.


ಘಟನೆ ವಿವರ: ಬಿ.ಎಂ.ಮುಮ್ತಾಝ್ ಅಲಿ ಅವರು ಕದ್ರಿಯ ಆಳ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಇವರು ಬೈಕಂಪಾಡಿಯಲ್ಲಿ ಮಂಗಳೂರು ಲೈನ್ ಮತ್ತು ಮೆರೈನ್ ಇಂಡಸ್ಟ್ರೀಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗಿನ ಜಾವ 3.30ಕ್ಕೆ ಕುಟುಂಬದ ಸದಸ್ಯರಿರುವ ವಾಟ್ಸಾೃಪ್ ಗ್ರೂಪ್‌ನಲ್ಲಿ ‘ನಾನು ಬದುಕಿ ಉಳಿಯುವುದಿಲ್ಲ, ದೇವರ ಬಳಿಗೆ ಹೋಗುತ್ತೇನೆ’ ಎಂದು ವಾಯ್ಸ ಮೆಸೇಜ್ ಹಾಕಿದ್ದರು. 4.40ಕ್ಕೆ ಅವರ ಪುತ್ರಿ ಮೆಸೇಜ್ ಗಮನಿಸಿ ತಂದೆಯನ್ನು ಹುಡುಕಿಕೊಂಡು ಮನೆಯವರೊಂದಿಗೆ ಕಾರಿನಲ್ಲಿ ಹೊರಟು ಕೂಳೂರು ಸೇತುವೆ ಬಳಿ ತಲುಪಿದಾಗ ತಂದೆಯ ಬಿ.ಎಂ.ಮುಮ್ತಾಝ್ ಅಲಿ ಅವರ ಕಾರು ಪತ್ತೆಯಾಗಿದೆ. ಕಾರಿನ ಎದುರು ಭಾಗ ನಜ್ಜುಗುಜ್ಜಾಗಿರುವುದು ಕಂಡು ಬಂದಿದೆ. ಆದರೆ ತಂದೆ ಕಾರಿನಲ್ಲಿ ಕಂಡು ಬಂದಿಲ್ಲ. ಬಳಿಕ ಕಾವೂರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯೆಲ್, ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸಹೋದರ ಮಾಜಿ ಶಾಸಕ ಮೊಯ್ದೀನ್ ಬಾವಾ ಹಾಗೂ ಇತರ ಕುಟುಂಬ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ತನಿಖೆಗೆ ಸಹಕಾರ ನೀಡಿದ್ದಾರೆ. ಇನ್ನೋರ್ವ ಸಹೋದರ ಬಿ.ಎಂ.ಫಾರೂಕ್ ಜೆಡಿಎಸ್ ಪಕ್ಷದ ನಾಯಕರಾಗಿದ್ದು, ಬೆಂಗಳೂರಿನಲ್ಲಿ ಉದ್ಯಮ ಹೊಂದಿದ್ದಾರೆ.

ಚಪ್ಪಲಿ, ಮೊಬೈಲ್ ನಾಪತ್ತೆ
ಮುಮ್ತಾಝ್ ಅಲಿ ಅವರಲ್ಲಿ ಎರಡು ಮೊಬೈಲ್‌ಗಳಿದ್ದು, ಒಂದು ಮೊಬೈಲ್ ಕಾರಿನಲ್ಲಿ ಪತ್ತೆಯಾಗಿದೆ. ಇನ್ನೊಂದು ಮೊಬೈಲ್ ಸಿಕ್ಕಿಲ್ಲ. ಅವರು ಧರಿಸಿದ್ದ ಚಪ್ಪಲಿ ಕೂಡ ಕಾರಿನಲ್ಲಾಗಲಿ, ನದಿಯ ನೀರಿನಲ್ಲಾಗಲಿ ಪತ್ತೆಯಾಗಿಲ್ಲ. ಸಂಜೆಯ ತನಕ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದರಿಂದ ಅವರು ನೀರಿಗೆ ಹಾರಿರುವ ಸಾಧ್ಯತೆ ಇಲ್ಲ. ಯಾವುದೋ ಮಾನಸಿಕ ಒತ್ತಡದಲ್ಲಿ ಎಲ್ಲಿಗಾದರೂ ಹೋಗಿರಬಹುದು ಎಂದು ಸ್ಥಳದಲ್ಲಿದ್ದ ಅವರ ಸ್ನೇಹಿತರು ಮಾತನಾಡುತ್ತಿರುವುದು ಕೇಳಿ ಬಂತು.


ವಾಹನ ದಟ್ಟಣೆ: ಕೂಳೂರು ಪೇಟೆಯಲ್ಲಿ ದಿನವಿಡೀ ವಾಹನ ದಟ್ಟಣೆ ಉಂಟಾಯಿತು. ಸೇತುವೆ ಬಳಿಗೆ ನೂರಾರು ಮಂದಿ ವಾಹನಗಳಲ್ಲಿ ಬಂದು ಪಾರ್ಕ್ ಮಾಡಿದ ಪರಿಣಾಮ ಹೆದ್ದಾರಿಯಲ್ಲಿ ವಾಹನ ದಟ್ಟಣೆಗೆ ಕಾರಣವಾಯಿತು. ಸಂಚಾರ ಉತ್ತರ ಠಾಣೆಯ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಶ್ರಮಿಸಿದರು.


ಸಂಜೆಯ ವೇಳೆ ಮಳೆ ಅಡ್ಡಿ
ಸಂಜೆಯ ವೇಳೆ ಗುಡುಗು ಸಹಿತ ಸುರಿದ ಮಳೆ ಮುಮ್ತಾಝ್ ಅಲಿ ಅವರ ಹುಡುಕಾಟಕ್ಕೆ ಅಡಚಣೆ ಉಂಟಾಯಿತು. ನದಿ ಬಳಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಹುಡುಕುವ ಪ್ರಯತ್ನ ನಡೆಯಿತು.

ಮರುಕಳಿಸಿದ ಸಿದ್ದಾರ್ಥ ನೆನಪು
ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರು 2019 ಜುಲೈ 19ರಂದು ರಾತ್ರಿ ಜಪ್ಪಿನಮೊಗರು ಬಳಿ ನೇತ್ರಾವತಿ ಸೇತುವೆಯಿಂದ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಕೋಸ್ಟ್‌ಗಾರ್ಡ್ ತಂಡದ ಸಹಾಯದಿಂದ ಎರಡು ದಿನಗಳ ಕಾಲ ನದಿ ನೀರಿನಲ್ಲಿ ಹುಡುಕಾಟ ನಡೆಸಲಾಗಿತ್ತು. ಅವರ ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳು ಸ್ಥಳದಲ್ಲಿ ನಿಂತು ಅವರಿಗಾಗಿ ಕಾದು ಕುಳಿತಿದ್ದರು. ಅಂತಿಮವಾಗಿ ಬೋಳಾರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅದೇ ಮಾದರಿಯಲ್ಲಿ ಬಿ.ಎಂ. ಮುಮ್ತಾಝ್ ಅಲಿ ಅವರು ನಾಪತ್ತೆಯಾಗಿರುವ ಕೂಳೂರುನಲ್ಲೂ ಬೆಳಗ್ಗೆಯಿಂದ ರಾತ್ರಿ ತನಕ ನೂರಾರು ಮಂದಿ ಕಾದು ಕುಳಿತಿದ್ದಾರೆ.