ಜಿಲ್ಲೆ

ಉಸಿರಾಟ ಸಮಸ್ಯೆ ಅರ್ಕುಳ ಗಣೇಶ್‌ತೋಟ ನಿವಾಸಿ ಗರ್ಭಿಣಿ ಮೃತ್ಯು

ಹರೀಶ ಎಂ.

ಮಂಗಳೂರು: ನಗರ ಹೊರ ವಲಯದ ಅರ್ಕುಳ ಗಣೇಶ್‌ತೋಟ ನಿವಾಸಿ ಎಂಟು ತಿಂಗಳ ಗರ್ಭಿಣಿಯೊಬ್ಬರು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.


ಶರಣ್ಯ (29) ಮೃತ ದುರ್ದೈವಿ. ಅವರಿಗೆ ಭಾನುವಾರ ತಡರಾತ್ರಿ ಸುಮಾರು 1.15ರ ಸುಮಾರಿಗೆ ಉಸಿರಾಡಲು ಸಮಸ್ಯೆಯಾಗಿ ದಮ್ಮು ಕಟ್ಟಲು ಆರಂಭವಾಗಿದೆ. ವೈದ್ಯರ ಸೂಚನೆಯಂತೆ ವಾಕಿಂಗ್ ಮಾಡಿದರೂ ಕಡಿಮೆಯಾಗದೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯದಲ್ಲಿ ಅವರಿಗೆ ವಾಂತಿಯಾಗಿದೆ. ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.


ಶರಣ್ಯ ಅವರು ಭಾನುವಾರ 29ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಮನೆಯಲ್ಲೇ ಸಣ್ಣ ಕಾರ್ಯಕ್ರಮವನ್ನೂ ಮಾಡಿದ್ದರು. ಎರಡನೇ ಬಾರಿ ಗರ್ಭಿಣಿಯಾಗಿದ್ದು, ಎರಡು ವರ್ಷದ ಒಂದು ಹೆಣ್ಣು ಮಗುವಿದೆ. ಎರಡು ಮೂರು ದಿನದ ಹಿಂದೆ ವೈದ್ಯರಲ್ಲಿಗೆ ತೆರಳಿ ತಪಾಸಣೆಯನ್ನು ಮಾಡಿಸಿಕೊಂಡು ಬಂದಿದ್ದರು.


ಮದುವೆಯಾಗಿ ಸುಮಾರು 8 ವರ್ಷವಾಗಿದ್ದು, ಪತಿಯೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದ ಶರಣ್ಯ ಅವರು, ತಾನು ಗರ್ಭಿಣಿ ಎಂದು ತಿಳಿಯುತ್ತಲೇ ಊರಿಗೆ ಬಂದು ನೆಲೆಸಿದ್ದರು.


ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆಗೆ ನೈಜ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.