ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ನಡೆದ ವಿಜಯೋತ್ಸವ ಸಂದರ್ಭ ನಡೆದ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮತ್ತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇಮ್ರಾನ್ ಮತ್ತು ಕೋಲಿ ಇರ್ಷಾದ್, ತಾಜುದ್ದೀನ್ ಯಾನೆ ಸಾದಿಕ್, ಸರ್ವನ್, ಮುಬಾರಕ್, ಅಶ್ರಫ್ ಹಾಗೂ ತಲ್ಲತ್ ಬಂಧಿತರು. ಈಗಾಗಲೇ ಆರೋಪಿಗಳಾದ ಶಕೀರ್, ಅಬ್ದುಲ್ ರಜಾಕ್, ಅಬೂಬಕ್ಕರ್ ಸಿದ್ದಿಕ್, ಸವಾದ್ ಹಾಗೂ ಅಬೂಬಕ್ಕರ್ ಎಂಬವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 13 ಮಂದಿಯನ್ನು ಬಂಧಿಸಿದಂತಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಭ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಕಳೆದ ಭಾನುವಾರ ಬೋಳಿಯಾರ್‌ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರೆಂದು ಬೈಕ್‌ನಲ್ಲಿ ಹೋಗುತ್ತಿದ್ದ ಮೂರು ಮಂದಿ ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಇರಿತಕ್ಕೆ ಒಳಗಾದ ಇನೋಳಿಯ ಹರೀಶ್(41) ಹಾಗೂ ನಂದ ಕುಮಾರ್(24) ಗಂಭೀರ ಗಾಯಗೊಂಡ ದೇರಳಕಟ್ಟೆ ಖಾಸದಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿ ಕೊಣಾಜೆ ಪೊಲೀಸರು ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದಲ್ಲದೆ, ಘೋಷಣೆ ಕೂಗಿ ಶಾಂತಿ ಕದಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಪ್ರತಿ ದೂರು ದಾಖಲಿಸಿದ್ದರು.