ಮಂಗಳೂರು: ಬಾಹ್ಯ ಪ್ರಪಂಚವನ್ನು ಕಣ್ಣಾರೆ ನೋಡುವ ಭಾಗ್ಯವಿಲ್ಲ. ಆದರೆ ಎದುರಿನಿಂದ ಬರುವ ಬಾಲ್‌ನ್ನು ಗ್ರಹಿಸಿ ಬ್ಯಾಟಿಂಗ್ ಮೂಲಕ ಬೌಂಡರಿಗೆ ಅಟ್ಟಿಸುವ ರೀತಿ ಅಧ್ಬುತ. ಬೌಲರ್‌ಗಳ ಪ್ರತಿ ಎಸೆತವೂ ಬ್ಯಾಟ್ಸ್‌ಮೆನ್‌ನನ್ನು ಔಟ್ ಮಾಡುವಂತಹ ಗುರಿ. ಬಾಲ್ ಬರುವ ಗ್ರಹಿಸುವಿಕೆಯಿಂದಲೇ ಕ್ಷೇತ್ರ ರಕ್ಷಣೆ ಹಾಗೂ ಕ್ಯಾಚ್ ಮಾಡುವ ಚಾಣಾಕ್ಷತೆ.
ಇದು ಲಯನ್ಸ್ ಕ್ಲಬ್ ವೆಲೆನ್ಸಿಯಾ ವತಿಯಿಂದ ‘ಲಯನ್ಸ್ ವೆಲೆನ್ಸಿಯಾ ಕಪ್ 2025’ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯ.
ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರಿನ ಅಂಧರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. 4 ಮಂದಿ ಸಂಪೂರ್ಣ ಅಂಧರು, 3 ಮಂದಿ ಭಾಗಶಃ ಹಾಗೂ 4 ಮಂದಿ ಶೇ.80ರಷ್ಟು ಅಂಧತ್ವ ಹೊಂದಿದವರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಭಾಗಶಃ ಅಂಧತ್ವ ಇದ್ದವರು ಕಣ್ಣಿಗೆ ಪಟ್ಟಿ ಕಟ್ಟಿ ಆಟವಾಡಿದರು.
ಮುಖ್ಯ ವಾಹಿನಿಗೆ ತರಲು ಕ್ರೀಡೆ ಪೂರಕ: ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕ್ರೀಡಾಕೂಟಗಳು ಪೂರಕ. ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ವೆಲೆನ್ಸಿಯಾ ಕಾರ್ಯ ಶ್ಲಾಘನೀಯ. ತಾನು ಗವರ್ನರ್ ಆಗಿದ್ದಾಗ 1995ರಲ್ಲಿ ಮೊದಲ ಬಾರಿಗೆ ಪಂದ್ಯಾವಳಿ ಆಯೋಜಿಸಿದ್ದೆ ಎಂದು ಪಂದ್ಯಾವಳಿ ಉದ್ಘಾಟಿಸಿದ ವೈದ್ಯ ಡಾ.ಶಾಂತಾರಾಮ ಶೆಟ್ಟಿ ಹೇಳಿದರು.
ಸರ್ಕಾರದಿಂದ ಸೌಲಭ್ಯ: ಅಂಧರಿಗೆ ಸರ್ಕಾರದಿಂದ ಕೆಲವು ಸೌಲಭ್ಯಗಳು ಲಭ್ಯವಿದ್ದು, ಅದನ್ನು ಪಡೆದುಕೊಳ್ಳಬೇಕು. ತಮ್ಮ ಇನ್ಯಾವುದೇ ಬೇಡಿಕೆಗಳಿದ್ದರೆ ಸರ್ಕಾರದ ಮಟ್ಟಕ್ಕೆ ತಲುಪಿಸಲು ಬದ್ಧ ಎಂದು ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಲಯನ್ಸ್ ಕ್ಲಬ್ ವೆಲೆನ್ಸಿಯಾ ಅಧ್ಯಕ್ಷ ಲೆಸ್ಲಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಸಿರಿಲ್ ಜಿವಾನ್, ಪಿಆರ್‌ಒ ನವೀನ್‌ಚಂದ್ರ ಸುವರ್ಣ ಉಪಸ್ಥಿತರಿದ್ದರು. ಕಾರ್ಯದರ್ಶಿ ಓಸ್ವಲ್ಡ್ ಡಿಕುನ್ಹಾ ವಂದಿಸಿದರು.
ಅಂಧರ ಕ್ರಿಕೆಟ್‌ನಲ್ಲಿ ವಿಶೇಷ ಬಾಲ್ ಬಳಸಲಾಗುತ್ತದೆ. ಅದರೊಳಗಿನಿಂದ ಬರುವ ಶಬ್ದವನ್ನು ಗ್ರಹಿಸಿಕೊಂಡು ಬ್ಯಾಟಿಂಗ್, ಫೀಲ್ಡಿಂಗ್ ಮಾಡುತ್ತಾರೆ. ಪ್ರತಿ ದಿನ ಅಭ್ಯಾಸ ನಡೆಸಿ ಅದರಲ್ಲಿ ಉತ್ತಮವಾಗಿ ಆಟ ಆಡುವವರನ್ನು ಪಂದ್ಯಾವಳಿಗೆ ಕರೆದುಕೊಂಡು ಬಂದಿದ್ದೇವೆ. ಅವರಿಗೆ ಇದರಿಂದ ಆತ್ಮಸ್ಥೆರ್ಯ ಮೂಡಲು ಸಹಕಾರಿಯಾಗಿದೆ.
ಎಲ್.ರವಿ
ತರಬೇತುದಾರರು ದೀಪಾ ಅಕಾಡೆಮಿ
ಬೆಂಗಳೂರು
ರಾಷ್ಟ್ರೀಯ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದೆವು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವನ್ನೂ ನಿಭಾಯಿಸುತ್ತೇನೆ. ಹಲವಾರು ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಅನುಭವ ಪಡೆದಿದ್ದೇನೆ.
ತಾಯಪ್ಪ
ಐಟಿಐ ವಿದ್ಯಾರ್ಥಿ
ದೀಪಾ ಅಕಾಡೆಮಿ ಬೆಂಗಳೂರು
ಮೈದಾನ, ಬೌಲಿಂಗ್, ಫೀಲ್ಡಿಂಗ್ ಯಾವುದೂ ಕಾಣಿಸುವುದಿಲ್ಲ. ಗ್ರಹಿಸುವಿಕೆಯಿಂದ ಆಟವಾಡುತ್ತೇವೆ. ಪ್ರತಿ ದಿನ ಅಭ್ಯಾಸ ಮಾಡುತ್ತೇವೆ. ಕಣ್ಣು ಸರಿ ಇದ್ದವರು ಬಹಳ ಮಂದಿ ಮೈದಾನಕ್ಕೆ ಇಳಿಯುವುದಿಲ್ಲ. ಅವರ ನಡುವೆ ನಾವು ಕಣ್ಣು ಕಾಣದಿದ್ದರೂ ಆಡುತ್ತೇವೆ ಎನ್ನುವ ಹೆಮ್ಮೆ ಇದೆ.
ಮಲ್ಲಿಕಾರ್ಜುನ
ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಶಿಮೊಗ್ಗ